HEALTH TIPS

ಕೇಂದ್ರ, ರಾಜ್ಯಗಳ ಸಂಬಂಧ: ಮುಖ್ಯಮಂತ್ರಿಗಳ ಅಭಿಪ್ರಾಯ ಕೇಳಿದ ಸ್ಟಾಲಿನ್

ಚೆನ್ನೈ: ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಕುರಿತಂತೆ ತಮಿಳುನಾಡು ಸರ್ಕಾರ ಸಿದ್ಧಪಡಿಸಿರುವ ಪ್ರಶ್ನಾವಳಿ ಬಗ್ಗೆ ಅಭಿಪ್ರಾಯಗಳನ್ನು ತಿಳಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರನ್ನು ಕೋರಿದ್ದಾರೆ.

ಈ ಕುರಿತು ಅವರು ಎಲ್ಲರಿಗೂ ಪತ್ರ ಬರೆದಿದ್ದು, ಅದರ ಪ್ರತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯ ಸರ್ಕಾರ ರಚಿಸಿರುವ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ನೇತೃತ್ವದ ಉನ್ನತ ಸಮಿತಿಯು ಈ ಪ್ರಶ್ನಾವಳಿ ಸಿದ್ಧಪಡಿಸಿದೆ. ಭಾರತೀಯ ಕಡಲಯಾನ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕೆ.ಅಶೋಕ ವರ್ಧನ್ ಶೆಟ್ಟಿ, ತಮಿಳುನಾಡು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಎಂ.ನಾಗನಾಥನ್ ಈ ಸಮಿತಿ ಸದಸ್ಯರಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ ಕುರಿತು ಆಗಸ್ಟ್‌ 23ರಂದು ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಈ ಪ್ರಶ್ನಾವಳಿ ಬಿಡುಗಡೆ ಮಾಡಲಾಗಿದೆ. ಉನ್ನತ ಸಮಿತಿಗೆ ನೆರವಾಗುವ ಉದ್ದೇಶದಿಂದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆನ್‌ಲೈನ್‌ ಮೂಲಕ ಪ್ರತಿಕ್ರಿಯೆಗಳನ್ನು ಕೇಳಲಾಗಿದೆ.

'ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಂದಿರುವ ಸರಣಿ ತಿದ್ದುಪಡಿಗಳು, ಕಾಯ್ದೆಗಳು ಹಾಗೂ ನೀತಿಗಳಿಂದಾಗಿ ಅಧಿಕಾರ ಹಂಚಿಕೆಯಲ್ಲಿ ಕ್ರಮೇಣ ವ್ಯತ್ಯಾಸಗಳಾಗಿದ್ದು, ಇವುಗಳು ಕೇಂದ್ರಕ್ಕೆ ಹೆಚ್ಚು ಅನುಕೂಲರವಾಗಿವೆ' ಎಂದು ಸ್ಟಾಲಿನ್‌ ಪತ್ರದಲ್ಲಿ ವಿವರಿಸಿದ್ದಾರೆ.

ಎಂ.ಕೆ.ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿಎಲ್ಲ ರಾಜ್ಯಗಳ ಸಾಮೂಹಿಕ ಆಶಯ ಸಾರುವ ದಾಖಲೆ ಸಿದ್ಧಪಡಿಸಲು ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ಈ ಪ್ರಯತ್ನವು ರಾಜಕೀಯ ಮತ್ತು ಪಕ್ಷಪಾತ ಧೋರಣೆ ಮೀರಿದ್ದಾಗಿದೆ

ಪತ್ರದಲ್ಲಿನ ಪ್ರಮುಖ ಅಂಶಗಳು

  • ಬೃಹತ್‌ ಸಚಿವಾಲಯಗಳು ಕೇಂದ್ರದ ಮಟ್ಟದಲ್ಲಿವೆ. ಇವುಗಳು ರಾಜ್ಯ ಸರ್ಕಾರಗಳ ಕಾರ್ಯವನ್ನೇ ನಕಲು ಮಾಡುತ್ತಿವೆ ಇಲ್ಲವೇ ಹಣಕಾಸು ಆಯೋಗದ ಮುಖಾಂತರ ಕಠಿಣ ನಿಬಂಧನೆಗಳನ್ನು ಹೇರುವ ಮೂಲಕ ರಾಜ್ಯಗಳಿಗೆ ಆಜ್ಞೆ ಮಾಡುವ ರೀತಿಯಲ್ಲಿ ಪ್ರಭಾವ ಬೀರುತ್ತಿವೆ

  • ಕೇಂದ್ರ ಸರ್ಕಾರ ಪುರಸ್ಕೃತ ಎಲ್ಲ ಯೋಜನೆಗಳಿಗೆ ಏಕ ರೀತಿಯ ಮಾರ್ಗಸೂಚಿಗಳನ್ನು ರಚಿಸಲಾಗುತ್ತದೆ. ಅನುಮೋದನೆಯಿಂದ ಹಿಡಿದು ಅನುಷ್ಠಾನ ವರೆಗೆ ಸೇರಿ ಎಲ್ಲ ಕಾರ್ಯಗಳಲ್ಲಿ ಅನಪೇಕ್ಷಿತ ಹಸ್ತಕ್ಷೇಪ ಮಾಡಲಾಗುತ್ತದೆ

  • ಪ್ರಸಕ್ತ ಬೆಳವಣಿಗೆಗಳ ಮರುಮೌಲ್ಯಮಾಪನ ನಡೆಸಬೇಕು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಚೌಕಟ್ಟನ್ನು ನಾವು ರೂಪಿಸುವುದು ಇಂದಿನ ತುರ್ತು

  • ಎಲ್ಲ ಮುಖ್ಯಮಂತ್ರಿಗಳು/ರಾಜಕೀಯ ನೇತಾರರು ಈ ವಿಷಯ ಕುರಿತು ವೈಯಕ್ತಿಕ ಗಮನ ಹರಿಸಬೇಕು. ಉನ್ನತ ಸಮಿತಿ ಮುಂದಿಟ್ಟಿರುವ ಪ್ರಶ್ನೆಗಳ ಕುರಿತು ಪರಿಶೀಲಿಸಿ ವಿಸ್ತೃತ ಉತ್ತರ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries