ನವದೆಹಲಿ: ರಾಜ್ಯಪಾಲರು ಒಪ್ಪಿಗೆಯನ್ನು 'ಶಾಶ್ವತವಾಗಿ' ತಡೆಹಿಡಿಯಲು ಅವಕಾಶ ನೀಡಿದರೆ ಮಸೂದೆಗಳ ಹಣೆಬರಹವನ್ನು ನಿರ್ಧರಿಸುವುದರಲ್ಲಿ ಸಂವಿಧಾನದ ವಿಧಿ 200ರಲ್ಲಿ ಬಳಸಲಾಗಿರುವ 'ಸಾಧ್ಯವಿದ್ದಷ್ಟು ಶೀಘ್ರ' ಎಂಬ ಪದವು ಯಾವುದೇ ಪ್ರಾಯೋಗಿಕ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಗುರುವಾರ ರಾಜ್ಯ ಸರಕಾರಗಳು ಅಂಗೀಕರಿಸಿದ ಮಸೂದೆಗಳನ್ನು ನಿರ್ವಹಿಸಲು ನ್ಯಾಯಾಲಯವು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕಾಲಮಿತಿಯನ್ನು ವಿಧಿಸಬಹುದೇ ಎಂಬ ಅಧ್ಯಕ್ಷೀಯ ಉಲ್ಲೇಖದ ವಿಚಾರಣೆ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಆರೋಪಿಸಿ ರಾಜ್ಯ ಸರಕಾರಗಳು ವಿಧಾನಸಭೆಗಳಲ್ಲಿ ಅಂಗೀಕೃತ ಮಸೂದೆಗಳನ್ನು ನಿರ್ವಹಿಸುವಲ್ಲಿ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಕ್ರಮಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸುವಂತಿಲ್ಲ ಎಂಬ ಕೇಂದ್ರದ ನಿವೇದನೆಗೆ ಪ್ರತಿಕ್ರಿಯಿಸಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಸಂವಿಧಾನ ರಚನೆಕಾರರು ವಿಧಿ 200ರಲ್ಲಿಯ ಮೊದಲಿನ ಆರು ವಾರಗಳ ಸಮಯಾವಕಾಶವನ್ನು ಉದ್ದೇಶಪೂರ್ವಕವಾಗಿ 'ಸಾಧ್ಯವಾದಷ್ಟು ಶೀಘ್ರ' ಎಂಬ ಪದಗುಚ್ಛದೊಂದಿಗೆ ಬದಲಿಸಿದ್ದರು ಮತ್ತು ಕರಡು ಸಮಿತಿಯ ಸದಸ್ಯರೋರ್ವರು ಈ ಪದಗುಚ್ಛವು 'ತಕ್ಷಣ'ಎಂದು ಸ್ಪಷ್ಟಪಡಿಸಿದ್ದರು ಎಂದೂ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಮಸೂದೆಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಈ ಪದಗುಚ್ಛವನ್ನು ನಿರ್ಲಕ್ಷಿಸಬಹುದೇ ಎಂದು ಕೇಂದ್ರವನ್ನು ಪ್ರಶ್ನಿಸಿತು.
ವಿಧಿ 200 ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವ,ಒಪ್ಪಿಗೆಯನ್ನು ತಡೆಹಿಡಿಯುವ,ಮಸೂದೆಗಳನ್ನು ಪುನರ್‌ಪರಿಶೀಲನೆಗೆ ಮರಳಿಸುವ ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಮೀಸಲಿರಿಸುವ ಅಧಿಕಾರಗಳನ್ನು ರಾಜ್ಯಪಾಲರಿಗೆ ನೀಡುತ್ತದೆ.
ಪ್ರಕರಣದ ವಿಚಾರಣೆ ಮುಂದುವರಿಯಲಿದೆ.




