ನವದೆಹಲಿ: ಮನುಕುಲದ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸಲು ಬಾಹ್ಯಾಕಾಶದ ಆಳಕ್ಕೆ ತಲುಪಿ ರಹಸ್ಯ ಭೇದಿಸಲು ಸಜ್ಜಾಗುವಂತೆ ದೇಶದ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಾತನಾಡಿದ ಅವರು, 'ಭವಿಷ್ಯದ ದೃಷ್ಟಿಯಿಂದ ಗಗನಯಾನಿಗಳ ಪಡೆಯನ್ನು ಭಾರತ ಸಜ್ಜುಗೊಳಿಸುತ್ತಿದೆ. ಯುವ ಸಮುದಾಯ ಅದರ ಭಾಗವಾಗಬೇಕು' ಎಂದಿದ್ದಾರೆ.
'ನಾವು ಚಂದ್ರ ಹಾಗೂ ಮಂಗಳವನ್ನು ತಲುಪಿದ್ದೇವೆ. ಈಗ, ಬಾಹ್ಯಾಕಾಶದ ಆಳಕ್ಕೆ ಇಳಿಯಬೇಕಾಗಿದೆ. ಅಲ್ಲಿ ಸಾಕಷ್ಟು ರಹಸ್ಯ ಅಡಗಿದ್ದು, ಮನುಕುಲದ ಭವಿಷ್ಯಕ್ಕೆ ಇದು ಹೆಚ್ಚಿನ ನೆರವಾಗಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದರ ನಂತರ ಒಂದು ಮೈಲಿಗಲ್ಲನ್ನು ಸಾಧಿಸುತ್ತಿರುವುದು ಭಾರತ ಮತ್ತದರ ವಿಜ್ಞಾನಿಗಳ ಸಹಜ ಗುಣ ಎಂಬಂತಾಗಿದೆ' ಎಂದಿದ್ದಾರೆ.
'ಕೊನೆ ಎಂಬುದೇ ಇಲ್ಲದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸದ್ಯ ಮುಂಚೂಣಿಯಲ್ಲಿರುವವರೇ ಶಾಶ್ವತ ಮುಂದಾಳುಗಳಲ್ಲ. ದೇಶದ ಉದ್ದಗಲದ ಬಾಹ್ಯಾಕಾಶ ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ನೀತಿ ನಿರೂಪಕರು ಜತೆಗೂಡಿ ಈ ಅನ್ವೇಷಣೆಯ ಭಾಗವಾಗಬೇಕು' ಎಂದು ಪ್ರಧಾನಿ ಹೇಳಿದರು.
'ವಿಜ್ಞಾನಿಗಳ ಕಠಿಣ ಪರಿಶ್ರಮದಿಂದಾಗಿ ಅತಿ ಶೀಘ್ರದಲ್ಲಿ ಗಗನಯಾನ ಯೋಜನೆವನ್ನು ಭಾರತ ಆರಂಭಿಸಲಿದೆ. ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸಜ್ಜುಗೊಳಿಸಲಿದೆ. ಈ ಕ್ಷೇತ್ರದಲ್ಲಿ ಖಾಸಗಿ ವಲಯವೂ ಪಾಲ್ಗೊಳ್ಳಬೇಕು ಎಂಬುದು ನನ್ನ ಆಶಯ. ಆ ಮೂಲಕ ಪ್ರತಿ ವರ್ಷ ಕನಿಷ್ಠ 50 ರಾಕೇಟ್‌ಗಳನ್ನು ಹಾರಿಸುವ ಗುರಿ ತಲುಪಬೇಕಿದೆ' ಎಂದು ಪ್ರಧಾನಿ ಹೇಳಿದ್ದಾರೆ.

