ಕಾಸರಗೋಡು: ಇತ್ತೀಚೆಗೆ ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಪ್ರಗತಿ ಕಂಡುಬಂದಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರು ಜಿಲ್ಲಾ ಕ್ರೀಡಾ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಜಿಲ್ಲಾ ಪಂಚಾಯತ್ ಮಧ್ಯಪ್ರವೇಶಿಸಿ 1 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಿದೆ ಎಂದು ಅವರು ಹೇಳಿದರು. ಹಿಂದುಳಿದ ಜಿಲ್ಲೆ ಎಂದು ಪರಿಗಣಿಸಲಾಗಿದ್ದ ಕಾಸರಗೋಡು ಈಗ ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕ್ರೀಡಾ ಕ್ಷೇತ್ರವನ್ನು ಪೋಷಿಸಲು ಹಲವು ಯೋಜನೆಗಳು ಮತ್ತು ಅಗತ್ಯ ನಿಧಿಗಳು ಲಭ್ಯವಿದ್ದರೂ, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಆದರೆ ಹಲವು ಯೋಜನೆಗಳು ಜಾರಿಗೆ ಬರಲು ವರ್ಷಗಳು ತೆಗೆದುಕೊಳ್ಳುವುದು ನಿರಾಶಾದಾಯಕವಾಗಿದೆ. ಹಲವು ಸ್ಥಳೀಯ ಕ್ರೀಡಾಪಟುಗಳು ಜಿಲ್ಲೆಗೆ ಹೆಮ್ಮೆಯ ಮೂಲವಾಗಿ ಹೊರಹೊಮ್ಮುತ್ತಿದ್ದಾರೆ. ಸ್ಥಳಾವಕಾಶದ ಲಭ್ಯತೆಯಲ್ಲಿನ ಮಿತಿಗಳು ಮತ್ತು ಅದರಿಂದ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಂದಾಗಿ, ಕ್ರೀಡಾ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯು ಸವಾಲಾಗಿ ಪರಿಣಮಿಸುತ್ತದೆ. ತ್ರಿಸ್ಥರ ಹಂತದ ಪಂಚಾಯತ್‍ಗಳ ಸಹಯೋಗದೊಂದಿಗೆ ಜಾರಿಗೆ ತರಲಾದ ಒಂದು ಪಂಚಾಯತ್ ಒಂದು ಕ್ರೀಡಾಂಗಣ ಯೋಜನೆಯ ಮೂಲಕ ಜಿಲ್ಲೆಯಲ್ಲಿ ನಿರ್ಮಿಸಲಾದ ಐದು ಕ್ರೀಡಾಂಗಣಗಳು ಜಿಲ್ಲೆಯ ಕ್ರೀಡಾ ವಲಯವನ್ನು ಉತ್ತೇಜಿಸಲು ಸಹಕಾರಿಯಾಗಿವೆ. ಯೋಜನೆಯನ್ನು ಇನ್ನಷ್ಟು ಸುಧಾರಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ಗೆ ಅರ್ಜಿಯನ್ನು ಸಲ್ಲಿಸಲಾಗುವುದು. ಸಾಮೂಹಿಕ ಪ್ರಯತ್ನಗಳ ಮೂಲಕ ಜಿಲ್ಲೆ ಮುನ್ನಡೆಯಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮಾತನಾಡಿ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಕ್ರೀಡಾ ಮಂಡಳಿ ಮತ್ತು ಸಂಘಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಜಿಲ್ಲಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಜಿಲ್ಲೆಯ ಕ್ರೀಡಾ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ ರೆಹಮಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಸ್ಥೆಗಳ ಸಾಮಾಜಿಕ ಬದ್ಧತಾ ನಿಧಿ ಮತ್ತು ಸರ್ಕಾರಿ ಯೋಜನೆ ಹಂಚಿಕೆಯನ್ನು ಬಳಸಿಕೊಂಡು ಕಳೆದ ಆರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಅಧ್ಯಕ್ಷರು ವಿವರಿಸಿದರು. ಕಲೆಕ್ಟರೇಟ್ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕ್ರೀಡಾ ಮಂಡಳಿ ಕಾರ್ಯದರ್ಶಿ ಟಿ.ವಿ. ಮದನನ್ ವರದಿ ಮಂಡಿಸಿದರು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಫುಟ್ಬಾಲ್ ಆಟಗಾರ್ತಿ ಪಿ. ಮಾಳವಿಕಾ ಅವರನ್ನು ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳು ಸನ್ಮಾನಿಸಿದರು. ಹೆಚ್ಚುವರಿ ಎಸ್ಪಿ ಸಿ.ಎಂ. ದೇವದಾಸ್, ಶಿಕ್ಷಣ ಉಪ ನಿರ್ದೇಶಕ ಟಿ.ವಿ. ಮಧುಸೂದನನ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಕ್ರೀಡಾ ಮಂಡಳಿಯ ರಾಜ್ಯ ಪ್ರತಿನಿಧಿ ಪೆÇ್ರ. ರಘುನಾಥ್, ಜಿಲ್ಲಾ ಕ್ರೀಡಾ ಅಧಿಕಾರಿ ಎಂ.ಎಸ್. ಸುದೀಪ್ ಬೋಸ್, ಕ್ರೀಡಾ ಮಂಡಳಿಯ ಕಾರ್ಯಕಾರಿ ಸದಸ್ಯರಾದ ಅನಿಲಬಂಗಲಂ ಮತ್ತು ಟಿ.ವಿ. ಕೃಷ್ಣನ್ ಮತ್ತು ವಿವಿಧ ಕ್ರೀಡಾ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕ್ರೀಡಾ ಮಂಡಳಿಯ ಉಪಾಧ್ಯಕ್ಷ ಪಿ. ಅಶೋಕನ್ ಮಾಸ್ಟರ್ ಸ್ವಾಗತಿಸಿ, ಕಾರ್ಯಕಾರಿ ಸದಸ್ಯ ಪಳ್ಳಂ ನಾರಾಯಣನ್ ವಂದಿಸಿದರು.





