ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಇಂದು (ಮಂಗಳವಾರ) ಸಂಭವಿಸಿದ ಮೇಘಸ್ಫೋಟದಿಂದ ದಿಢೀರ್ ಪ್ರವಾಹ, ಭೂಕುಸಿತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಭಾರಿ ಮಳೆಯಿಂದಾಗಿ ಅನೇಕ ಜನರು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದಿಢೀರ್ ಪ್ರವಾಹದ ಪರಿಣಾಮ ನೀರಿನ ರಭಸಕ್ಕೆ ಹಲವು ಮನೆಗಳು ಭಾಗಶಃ ಕೊಚ್ಚಿ ಹೋಗಿವೆ ಎನ್ನಲಾಗಿದೆ.
ಭಾರಿ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಸಾರ್ವಜನಿಕರು ನದಿಗಳ ಬಳಿ ಸೆಲ್ಫಿ ಹಾಗೂ ರೀಲ್ಸ್ ಮಾಡುವ ಗೀಳಿಗಾಗಿ ತಮ್ಮ ಪ್ರಾಣವನ್ನು ಪಣಕಿಡಬೇಡಿ ಎಂದು ಉತ್ತರಾಖಂಡ ಪೊಲೀಸರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ದಿಢೀರ್ ಪ್ರವಾಹ ಸಂಬಂಧ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿದ್ದು, 'ಈ ಸುದ್ದಿ ಅತ್ಯಂತ ದುಃಖಕರ ಎಂದಿದ್ದಾರೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಸೇರಿದಂತೆ ಇತರೆ ಸಂಬಂಧಿತ ತಂಡಗಳು ಯುದ್ಧೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ' ಎಂದು ಅವರು ಹೇಳಿದ್ದಾರೆ.
'ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇನೆ. ಎಲ್ಲರ ಸುರಕ್ಷತೆಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ' ಎಂದು ಧಾಮಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.




