ಕಾಸರಗೋಡು: ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ವಿಶೇಷ ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್ ಹೇಳಿದರು. ಅವರು ಪುಲಿಕೂರು,ಕೊಲ್ಲಂಗಾನ ಪರಿಶಿಷ್ಟವರ್ಗದ'ಉನ್ನತಿ'ಪ್ರದೇಶಗಳಿಗೆ ಭೇಟಿ ನೀಡಿದ ನಂತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಯೋಗದ ಮುಂದೆ ಬಂದಿದ್ದ ಜನರನ್ನುದ್ದೇಶಿಸಿ ಮಾತನಾಡಿದರು.
ಡಿಜಿಟಲ್ ಸಮೀಕ್ಷೆ ಪೂರ್ಣಗೊಂಡ ನಂತರ, ಹಕ್ಕು ಪತ್ರ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು. ಉದ್ಯೋಗಕ್ಕೆ ಅರ್ಹರಾಗಲು ಅಗತ್ಯ ಶಿಕ್ಷಣ ಪಡೆಯುವುದುರ ಜತೆಗೆ ಮಾದಕ ದ್ರವ್ಯಗಳ ಬಳಕೆಯಿಂದ ದೂರವಿರಬೇಕು ಎಂದು ತಿಳಿಸಿದರು.
ಪುಲಿಕೂರು, ಮಧೂರು ಮತ್ತು ಕೊಲ್ಲಂಗಣ ಉನ್ನತಿ ನಿವಾಸಿಗಳೊಂದಿಗೆ ನಡೆಸಿದ ಚರ್ಚೆಯ ನಂತರ ಆಯೋಗವು ಚೆನೆಕೋಡ್, ಚೆಂಗರ ಪುನರ್ವಸತಿ ಯೋಜನೆಗೆ ಸಂಬಂಧಿಸಿದ ದೂರುಗಳನ್ನು ಆಲಿಸಲಾಯಿತು. ಚೆಂಗರ ಪುನರ್ವಸತಿ ಸ್ಥಳಕ್ಕೆ ಭೇಟಿನೀಡಿ ಅಲ್ಲಿನ ಜನರ ಕುಂದುಕೊರತೆ ಆಲಿಸಲಾಯಿತು. ಆಯೋಗದ ಸದಸ್ಯರಾದ ವಕೀಲ ಸೇತು ನಾರಾಯಣನ್, ಟಿ.ಕೆ. ವಾಸು ಮತ್ತು ಆಯೋಗದ ಸಹಾಯಕ ವಿಭಾಗ ಅಧಿಕಾರಿ ವಿ. ಪ್ರಣವ್ ಮಾನಸ್ ಭಾಗವಹಿಸಿದ್ದರು.
ವಿವಿಧೆಡೆ ನಡೆದ ಚರ್ಚೆಯಲ್ಲಿ ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ವಾರ್ಡ್ ಸದಸ್ಯರಾದ ಉದಯಕುಮಾರ್, ಸದಸ್ಯ ಅಂಬಿಲಿ, ಮಧೂರು ಪಂಚಾಯಿತಿ ಕಾರ್ಯದರ್ಶಿ ಅಜೀಶ್ ಖಾನ್, ಎಟಿಡಿಒ ಕೆ.ವಿ. ರಾಘವನ್, ಸಾರ್ವಜನಿಕ ಕಾರ್ಯಕರ್ತ ಸಂಜೀವ್‍ಪುಲಿಕೂರು, ಊರ್ ಮೂಪನ್ ಮರಯ್ ವೇಣು ಮತ್ತು ವೆಂಕಪ್ಪ ನಾಯ್ಕ್ ಭಾಗವಹಿಸಿದ್ದರು. ಕಾಸರಗೋಡು ಪುರಸಭೆಯ ಸಮ್ಮೇಳನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದುಕೊರತೆ ಪರಿಹಾರ ಅದಾಲತ್‍ನಲ್ಲಿ 152 ದೂರುಗಳಲ್ಲಿ 137 ದೂರುಗಳನ್ನು ಪರಿಹರಿಸಲಾಗಿದ್ದು, ಇದರ ಮುಮದುವರಿದ ಭಾಗವಾಗಿ ಕಾಲನಿಗಳ ಭೇಟಿ ಆಯೋಜಿಸಲಾಘಿತ್ತು.





