HEALTH TIPS

ಭ್ರಷ್ಟಾಚಾರ ನಿರ್ಮೂಲನೆಗೆ ತಿದ್ದುಪಡಿ ಮಸೂದೆ:ವಿರೋಧ ‍ಪಕ್ಷಗಳ ಖಂಡನೆಗೆ ಮೋದಿ ಕಿಡಿ

ಪಟ್ನಾ: ಆಡಳಿತದ ಉನ್ನತ ಹಂತಗಳಲ್ಲಿನ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಮಂಡಿಸಿರುವ ಸಂವಿಧಾನದ 130ನೇ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ 'ಇಂಡಿಯಾ ಮೈತ್ರಿಕೂಟ'ದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಿಡಿಕಾರಿದ್ದಾರೆ.

ಗಯಾಜಿದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, 130ನೇ ತಿದ್ದುಪಡಿ ಹಾಗೂ ಬಿಹಾರದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

ಅಧಿಕಾರದಲ್ಲಿರುವ ಜನರು ಜೈಲಿನಿಂದ ಸರ್ಕಾರಗಳನ್ನು ನಡೆಸುತ್ತಿದ್ದರು, ಕಂಬಿಗಳ ಹಿಂದಿನಿಂದ ಕಡತಗಳಿಗೆ ಸಹಿ ಹಾಕುತ್ತಿದ್ದರು, ಸಾಂವಿಧಾನಿಕ ಔಚಿತ್ಯವನ್ನು ಹಾಳು ಮಾಡುತ್ತಿದ್ದ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಉಲ್ಲೇಖಿಸಿ ಮೋದಿ ಟೀಕಿಸಿದ್ದಾರೆ.

ಸತತ 30 ದಿನ ಜೈಲುವಾಸಕ್ಕೆ ಒಳಗಾದರೆ ಪ್ರಧಾನಿ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ ಮತ್ತು ಸಚಿವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದೆ. ಜೈಲು ಸೇರಿದರೆ ಕೆಳ ಹಂತದ ಗುಮಾಸ್ತನನ್ನು ಅಮಾನತುಗೊಳಿಸುತ್ತವೆ. ಹಾಗಾದರೆ ಉನ್ನತ ಹಂತದ ಅಧಿಕಾರಿಗಳಿಗೆ ಯಾಕೆ ಈ ಕಾನೂನಿಲ್ಲ. ಹೀಗಾಗಿಯೇ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ. ಈ ತಿದ್ದುಪಡಿ ಮಸೂದೆಯಿಂದಾಗಿ ಆರ್‌ಜೆಡಿ ಹಾಗೂ ಎಡಪಂಥೀಯ ಪಕ್ಷಗಳು ಹತಾಶೆಗೆ ಒಳಗಾಗಿದ್ದಾರೆ, ಕೋಪಗೊಂಡಿದ್ದಾರೆ ಎಂದೂ ಮೋದಿ ಹೇಳಿದ್ದಾರೆ.

ಸತತ 11 ವರ್ಷಗಳ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ ಎಂದ ಮೋದಿ, ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಪಕ್ಷಗಳ ಹಗರಣಗಳು ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿದೆ ಎಂದಿದ್ದಾರೆ.

ದೇಶ ಎದುರಿಸುತ್ತಿರುವ ಮತ್ತೊಂದು ಸಮಸ್ಯೆ ಒಳನುಸುಳುವಿಕೆ. ನುಸುಳುಕೋರರು ನಮ್ಮ ದೇಶದ ಸಂಪನ್ಮೂಲಗಳಲ್ಲಿ ಭಾಗಿಯಾಗಲು ಬಿಡಬಾರದು. ಹೀಗಾಗಿ ಜನಗಣತಿ ನಡೆಸಲು ಸೂಚಿಸಲಾಗಿದೆ. ಆದರೆ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳು ವೋಟ್‌ ಬ್ಯಾಂಕ್ ರಾಜಕೀಯಕ್ಕಾಗಿ ಒಳನುಸುಳುವವರನ್ನು ರಕ್ಷಿಸಲು ಬಯಸುತ್ತವೆ ಎಂದು ಮೋದಿ ಆರೋಪಿಸಿದ್ದಾರೆ.

ಇದೇ ವೇಳೆ ₹13,000 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸ್ಥಳೀಯ ಸಂಸದರೂ ಆಗಿರುವ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries