ಕೀವ್: ಉಕ್ರೇನ್ ನೌಕಾಪಡೆಯ ಅತಿದೊಡ್ಡ ಹಡಗಿನ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಉಕ್ರೇನ್ ನೌಕಾಪಡೆಯ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ನೌಕಾಪಡೆಯ ವಕ್ತಾರ ಡಿಮಿಟ್ರೋ ಪ್ಲೆಟೆನ್ಚುಕ್ ತಿಳಿಸಿದ್ದಾರೆ.
"ಉಕ್ರೇನ್ ನೌಕಾಪಡೆಯ ಅತಿದೊಡ್ಡ ಹಡಗು ʼಸಿಮ್ಫೆರೊಪೋಲ್ʼ ಸಂಪೂರ್ಣವಾಗಿ ನಾಶವಾಗಿ ಸಮುದ್ರ ಪಾಲಾಗಿದೆ. ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್‌ಗಳನ್ನು ಈ ಹಡಗು ಹೊಂದಿತ್ತು" ಎಂದು ರಷ್ಯಾದ ರಕ್ಷಣಾ ಸಚಿವಾಲಯ ಕೂಡ ತಿಳಿಸಿದೆ.
ಉಕ್ರೇನ್‌ನ ಒಡೆಸ್ಸಾ ಪ್ರದೇಶದಲ್ಲಿರುವ ಡ್ಯಾನ್ಯೂಬ್ ನದಿಯ ಡೆಲ್ಟಾದಲ್ಲಿ ಈ ದಾಳಿ ನಡೆದಿದೆ. ಉಕ್ರೇನ್ ನೌಕಾಪಡೆಯ ಹಡಗನ್ನು ಹೊಡೆದುರುಳಿಸಲು ರಷ್ಯಾ ಮಾಡಿದ ಸಮುದ್ರ ಡ್ರೋನ್‌ನ ಮೊದಲ ಯಶಸ್ವಿ ಬಳಕೆ ಇದಾಗಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.
ಸಿಮ್ಫೆರೊಪೋಲ್ ಅನ್ನು 2019ರಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಎರಡು ವರ್ಷಗಳ ನಂತರ ಉಕ್ರೇನ್ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು. 2014ರ ಬಳಿಕ ಉಕ್ರೇನ್ ತಯಾರಿಸಿದ ದೊಡ್ಡ ಹಡಗು ಇದಾಗಿದೆ ಎಂದು ಹೇಳಲಾಗಿದೆ.




