HEALTH TIPS

ಚುನಾವಣಾ ಆಯೋಗದ ಅಧಿಕಾರ ದುರ್ಬಳಕೆ ವಿರುದ್ಧ ರಾಜಕೀಯವಾಗಿ ಹೋರಾಡಬೇಕು: ಚಿದಂಬರಂ

ನವದೆಹಲಿ: ಚುನಾವಣಾ ಆಯೋಗವು ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜ್ಯಗಳಲ್ಲಿ ಚುನಾವಣೆಗಳ ಸ್ವರೂಪವನ್ನು ಬದಲಿಸಲು ಪ್ರಯತ್ನಿಸುತ್ತಿದೆ. ಇದರ ವಿರುದ್ಧ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸಬೇಕಿದೆ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಕರೆ ನೀಡಿದ್ದಾರೆ.

ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕ್ರಮವು ಕುತೂಹಲ ಕೆರಳಿಸುತ್ತಿದೆ ಎಂದಿರುವ ಅವರು, ಈ ಸಂಬಂಧ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಬಿಹಾರದಲ್ಲಿ 65 ಲಕ್ಷ ಜನರು ಮತದಾನದಿಂದ ವಂಚಿತರಾಗುವ ಅಪಾಯ ಎದುರಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ, ತಮಿಳುನಾಡಿನಲ್ಲಿ 6.5 ಲಕ್ಷ ಮತದಾರರನ್ನು ಹೊಸದಾಗಿ ಸೇರಿಸಿರುವುದು ಆತಂಕಕಾರಿ ಹಾಗೂ ಕಾನೂನುಬಾಹಿರ ಎಂಬುದು ಸ್ಪಷ್ಟವಾಗಿದೆ' ಎಂದು ಹೇಳಿದ್ದಾರೆ.

'ವಲಸೆ ಕಾರ್ಮಿಕರನ್ನು 'ಶಾಶ್ವತ ವಲಸಿಗರು' ಎಂದು ಕರೆಯುವುದು ಅವರಿಗೆ ಮಾಡಿದ ಅವಮಾನವೇ ಸರಿ' ಎಂದಿರುವ ಕಾಂಗ್ರೆಸ್ ನಾಯಕ, ವಲಸೆ ಕಾರ್ಮಿಕರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕ್ರಮವನ್ನು ವಿರೋಧಿಸಿದ್ದಾರೆ. ಹಾಗೆಯೇ, 'ತಮಿಳುನಾಡಿನಲ್ಲಿ ಮತದಾರರು ತಮ್ಮ ಆಯ್ಕೆಯ ಸರ್ಕಾರವನ್ನು ಅಧಿಕಾರಕ್ಕೆ ತರುವುದಕ್ಕೆ ಹಸ್ತಕ್ಷೇಪ ಮಾಡಲಾಗುತ್ತಿದೆ' ಎಂದು ಪ್ರತಿಪಾದಿಸಿದ್ದಾರೆ.

'ವಲಸೆ ಕಾರ್ಮಿಕರು ಬಿಹಾರಕ್ಕೆ ಅಥವಾ ವಿಧಾನಸಭೆ ಚುನಾವಣೆಗಳಲ್ಲಿ ಮತದಾನ ಮಾಡಲು ಅವರವರ ಮಾತೃ ರಾಜ್ಯಕ್ಕೆ ಹಿಂದಿರುಗಬಾರದೇ? ಎಂದಿರುವ ಅವರು, 'ವಲಸೆ ಕಾರ್ಮಿಕರು 'ಛತ್‌ ಪೂಜಾ' ಆಚರಣೆ ವೇಳೆ ಬಿಹಾರಕ್ಕೆ ವಾಪಸ್‌ ಆಗುವುದಿಲ್ಲವೇ' ಎಂದು ಕೇಳಿದ್ದಾರೆ.

'ಮತದಾರನಾಗಿ ನೋಂದಣಿಯಾಗಲು ಯಾವುದೇ ವ್ಯಕ್ತಿಗೆ ಸ್ಥಿರ ಹಾಗೂ ಶಾಶ್ವತವಾದ ಕಾನೂನಾತ್ಮಕ ನೆಲೆ ಇರಬೇಕು. ವಲಸೆ ಕಾರ್ಮಿಕರು ಬಿಹಾರದಲ್ಲಿ (ಅಥವಾ ಬೇರೆ ರಾಜ್ಯಗಳಲ್ಲಿ) ಆ ರೀತಿಯ ನೆಲೆಗಳನ್ನು ಹೊಂದಿದ್ದಾರೆ. ಹೀಗಿರುವಾಗ, ಅವರನ್ನು ತಮಿಳುನಾಡಿನಲ್ಲಿ ಮತದಾರರ ಪಟ್ಟಿಗೆ ಹೇಗೆ ನೋಂದಾಯಿಸಲು ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.

'ಒಂದುವೇಳೆ ವಲಸೆ ಕಾರ್ಮಿಕರ ಕುಟುಂಬ ಬಿಹಾರದಲ್ಲಿ ಶಾಶ್ವತ ನೆಲೆ ಹೊಂದಿದ್ದು, ಬಿಹಾರದಲ್ಲಿಯೇ ವಾಸವಿದ್ದರೆ, ಅಂತಹವರನ್ನು 'ತಮಿಳುನಾಡಿಗೆ ಶಾಶ್ವತವಾಗಿ ವಲಸೆ ಹೋದವರು' ಎಂದು ಹೇಗೆ ಪರಿಗಣಿಸುತ್ತೀರಿ' ಎಂದು ಮತ್ತೊಂದು ಪ್ರಶ್ನೆ ಎಸೆದಿದ್ದಾರೆ.

'ಚುನಾವಣಾ ಆಯೋಗವು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯಗಳಲ್ಲಿ ಚುನಾವಣಾ ಸ್ವರೂಪ ಹಾಗೂ ಮಾದರಿಗಳನ್ನೇ ಬದಲಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಅಧಿಕಾರ ದುರ್ಬಳಕೆ ವಿರುದ್ಧ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸಬೇಕಿದೆ' ಎಂದು ಕರೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಬಿಹಾರದಲ್ಲಿ ಎಸ್‌ಐಆರ್‌ ನಡೆಸುತ್ತಿರುವ ಚುನಾವಣಾ ಆಯೋಗ, ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಗುರಿ ಹಾಕಿಕೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಬೇಕು ಎಂದೂ ಒತ್ತಾಯಿಸುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries