HEALTH TIPS

ಬಾಂಧವ್ಯ ಸುಧಾರಣೆಗೆ ಪಾಕಿಸ್ತಾನವೇ ಹೊಣೆಗಾರಿಕೆ ಪ್ರದರ್ಶಿಸಬೇಕು: ಶಶಿ ತರೂರ್

ನವದೆಹಲಿ: 'ಪಾಕಿಸ್ತಾನದೊಂದಿಗಿನ ಬಾಂಧವ್ಯ ಸಹಜ ಸ್ಥಿತಿಗೆ ತರುವ ವಿಚಾರದಲ್ಲಿ ಭಾರತಕ್ಕೆ ಇನ್ನೊಂದು ಹೆಜ್ಜೆ ಮುಂದಿಡುವ ಹಂಬಲವಿಲ್ಲ. ಇದಕ್ಕಾಗಿ ಪಾಕಿಸ್ತಾನವೇ ತನ್ನ ನೆಲದಲ್ಲಿರುವ ಭಯೋತ್ಪಾದಕ ಜಾಲವನ್ನು ನಿರ್ನಾಮ ಮಾಡುವ ಮೂಲಕ ಹೊಣೆಗಾರಿಕೆ ಪ್ರದರ್ಶಿಸಬೇಕು' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಮಾಜಿ ರಾಯಭಾರಿ ಸುರೇಂದ್ರ ಕುಮಾರ್ ಅವರು ಸಂಪಾದಿಸಿದ 'Whither India-Pakistan Relations Today' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ತರೂರ್, 'ಪಾಕಿಸ್ತಾನದ ನಡವಳಿಕೆಯನ್ನು ಗಮನಿಸಿದಾಗ, ಹೊಣೆಗಾರಿಕೆ ಅವರ ಮೇಲಿದೆ. ತನ್ನ ನೆಲದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಮಟ್ಟ ಹಾಕುವ ಮೂಲಕ ಪ್ರಾಮಾಣಿಕತೆ ತೋರಿಸುವತ್ತ ಮೊದಲ ಹೆಜ್ಜೆ ಇಡಬೇಕು' ಎಂದು ಹೇಳಿದ್ದಾರೆ.

'1950ರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಲಿಯಾಕತ್ ಅಲಿ ಖಾನ್ ನಡುವಣ ಒಪ್ಪಂದದಿಂದ ಹಿಡಿದು 1999ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಲಾಹೋರ್‌ಗೆ ಬಸ್ ಪ್ರಯಾಣ ಮತ್ತು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಲಾಹೋರ್ ಭೇಟಿಯವರೆಗೂ ಪ್ರತಿ ಬಾರಿಯೂ ಭಾರತದ ಪ್ರಯತ್ನಗಳಿಗೆ ಪಾಕಿಸ್ತಾನ ದ್ರೋಹ ಬಗೆದಿತ್ತು' ಎಂದು ಅವರು ಉಲ್ಲೇಖಿಸಿದ್ದಾರೆ.

'ಉಗ್ರರ ನೆಲೆಗಳನ್ನು ನಾಶಮಾಡಲು ಪಾಕಿಸ್ತಾನ ಗಂಭೀರತೆ ಪ್ರದರ್ಶಿಸುತ್ತಿಲ್ಲವೇಕೆ? ಉಗ್ರರ ನೆಲೆ ಯಾವುದು ಎಂಬುದು ಎಲ್ಲರಿಗೂ ಗೊತ್ತಿದೆ. ಪಾಕಿಸ್ತಾನದಲ್ಲಿರುವ 52 ವ್ಯಕ್ತಿ, ಸಂಸ್ಥೆ ಹಾಗೂ ಸ್ಥಳಗಳ ಹೆಸರುಗಳನ್ನು ವಿಶ್ವಸಂಸ್ಥೆಯ ಸಮಿತಿಯು ಪಟ್ಟಿ ಮಾಡಿದೆ. ಇದು ಪಾಕಿಸ್ತಾನಕ್ಕೆ ಗೊತ್ತಿಲ್ಲದ ವಿಚಾರವೇನಲ್ಲ' ಎಂದಿದ್ದಾರೆ.

'ಅಂತವರನ್ನು ಬಂಧಿಸಿ ಮೊದಲು ಬದ್ಧತೆಯನ್ನು ಪ್ರದರ್ಶಿಸಬೇಕು. ಅಂತಹ ಕ್ರಮ ಕೈಗೊಂಡ ಬಳಿಕ ಪ್ರತಿಕ್ರಿಯಿಸಲು ಭಾರತ ಸಿದ್ಧವಾಗಿರುತ್ತದೆ. ಇದರ ಬದಲು ಭಾರತವೇ ಮೊದಲ ಹೆಜ್ಜೆ ಇಡುವುದಿಲ್ಲ' ಎಂದು ಹೇಳಿದ್ದಾರೆ.

'2008ರ ಮುಂಬೈ ಭಯೋತ್ಪಾದಕ ದಾಳಿ ಉಲ್ಲೇಖಿಸಿದ ತರೂರ್, ಪಾಕಿಸ್ತಾನ ಭಾಗಿಯಾಗಿರುವುದಕ್ಕೆ ಭಾರತ ಪುರಾವೆ ಒದಗಿಸಿದ್ದರೂ ಕೃತ್ಯದ ಮಾಸ್ಟರ್ ವಿರುದ್ಧ ಕ್ರಮ ಜರುಗಿಸಿಲ್ಲ' ಎಂದಿದ್ದಾರೆ.

'ಇವೆಲ್ಲದರ ಹೊರತಾಗಿಯೂ ಭಾರತವು ಅದ್ಭುತ ಸಂಯಮವನ್ನು ಪ್ರದರ್ಶಿಸಿತು' ಎಂದು ತರೂರ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries