ಸಸಾರಾಮ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದಲ್ಲಿರುವವರೆಗೆ ಸಂವಿಧಾನ ಅಪಾಯದಲ್ಲಿರುತ್ತದೆ. ಈ ಸರ್ಕಾರ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಆರೋಪಿಸಿದ್ದಾರೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಮತ ಕಳ್ಳತನ ವಿರೋಧಿಸಿ ಹಮ್ಮಿಕೊಂಡಿರುವ 'ಮತದಾರನ ಅಧಿಕಾರ (ಮತದಾರರ ಹಕ್ಕು) ಯಾತ್ರೆ'ಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಕಾಂಗ್ರೆಸ್ ಯಾವಾಗಲೂ ಜನರ ಧ್ವನಿಯಾಗಿ ಅವರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತದೆ. ಕೇಂದ್ರದ ಬಿಜೆಪಿ ಸರ್ಕಾರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಏಜೆಂಟ್‌ರಂತೆ ಕೆಲಸ ಮಾಡುತ್ತಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ.
ಇತ್ತೀಚೆಗೆ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ನನ್ನು ಶ್ಲಾಘಿಸಿದ್ದರು. ಆದರೆ ಆರ್‌ಎಸ್‌ಎಸ್ ಬ್ರಿಟಿಷರ ಜತೆಗೂಡಿ ಕೆಲಸ ಮಾಡಿತ್ತು. ಸ್ವಾತಂತ್ರ್ಯ ವಿರೋಧಿಸಿದವರನ್ನು ಬೆಂಬಲಿಸಿತ್ತು. ಆದರೆ ಕಾಂಗ್ರೆಸ್ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿತ್ತು ಹಾಗೂ ಅದೇ ರೀತಿ ಮುಂದುವರಿಸುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎನ್‌ಡಿಎ ಸರ್ಕಾರವನ್ನು ಜನರು ಕಿತ್ತೆಸೆಯುತ್ತಾರೆ ಎಂದು ಖರ್ಗೆ ತಿಳಿಸಿದ್ದಾರೆ.
'ಮತದಾರರ ಅಧಿಕಾರ ಯಾತ್ರೆ'ಯು ಬಿಹಾರದ ಸಸಾರಾಮ್ನಿಂದ ಆರಂಭಗೊಂಡಿದೆ. ಈ ಯಾತ್ರೆಯು ಬಿಹಾರದಾದ್ಯಂತ 16 ದಿನಗಳು ನಡೆಯಲಿದೆ. 1,300 ಕಿ.ಮೀ ಸಾಗಲಿರುವ ಈ ಯಾತ್ರೆಯು ಸೆಪ್ಟೆಂಬರ್ 1ರಂದು ಪಾಟ್ನಾದಲ್ಲಿ ಸಮಾರೋಪಗೊಳ್ಳಲಿದೆ.




