ಕಣ್ಣೂರು: ಕೇರಳದ ಅರಣ್ಯ ಸಚಿವ ಎ.ಕೆ. ಶಶೀದ್ರನ್ ಅವರ ಸೋದರ ಸೊಸೆ ಶ್ರೀಲೇಖಾ ಎ.ಕೆ. (67) ಹಾಗೂ ಅವರ ಪತಿ ಪ್ರೇಮರಾಜನ್ ಪಿ.ಕೆ. (76) ಸಾವಿನ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಚಿರಕ್ಕಲ್‌ನ ಮನೆಯಲ್ಲಿ ಒಂದು ದಿನದ ಹಿಂದೆ ಸುಟ್ಟ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದವು.
ಇವರ ಪುತ್ರರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದೇಶದಿಂದ ಹಿಂತಿರುಗುತ್ತಿದ್ದ ಒಬ್ಬ ಮಗನನ್ನು ವಿಮಾನ ನಿಲ್ದಾಣದಿಂದ ಕರೆತರಲು ಕಾರು ಚಾಲಕ ಗುರುವಾರ ಸಂಜೆ 6ರ ಸುಮಾರಿಗೆ ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಸಂಬಂಧಿಕರು ಹಾಗೂ ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಗೆ ಹೋದಾಗ ಮೃತದೇಹಗಳು ಪತ್ತೆಯಾಗಿವೆ.
ಶ್ರೀಲೇಖಾ ಅವರ ತಲೆಗೆ ಗಾಯವಾಗಿದ್ದು, ರಕ್ತದ ಕಲೆಗಳಿರುವ ಸುತ್ತಿಗೆಯನ್ನು ವಶಪಡಿಸಿಕೊಳ್ಳಲಾಗಿದೆ. ಶವಗಳಿಗೆ ಬೆಂಕಿ ಹಚ್ಚುವ ಮುನ್ನವೇ ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.




