ನವದೆಹಲಿ: ಅಂಗವಿಕಲರ ಬಗ್ಗೆ ಅಪಹಾಸ್ಯ ಮಾಡಿದ್ದಕ್ಕಾಗಿ ಯೂಟ್ಯೂಬರ್ ಸಮಯ್ ರೈನಾ ಸೇರಿದಂತೆ ಐವರು ಇನ್‌ಫ್ಲೂಯನ್ಸರ್‌ಗಳಿಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕ್ಷಮೆಯಾಚಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
ಅಂಗವಿಕಲರು ಮತ್ತು ವಿರಳ ಕಾಯಿಲೆಯಾದ 'ಎಸ್‌ಎಂಎ'ಯಿಂದ (ಸ್ಪೈನಲ್ ಮಸ್ಕ್ಯುಲರ್ ಎಟ್ರೋಫಿ) ಬಳಲುತ್ತಿರುವವರನ್ನು ಈ ಐದು ಮಂದಿ ತಮ್ಮ ಕಾರ್ಯಕ್ರಮದಲ್ಲಿ ಗೇಲಿ ಮಾಡಿದ್ದಾರೆ ಎಂದು ಸರ್ಕಾರೇತರ ಸಂಘಟನೆ (ಎನ್‌ಜಿಒ) 'ಕ್ಯೂರ್ ಎಸ್‌ಎಂಎ ಫೌಂಡೇಷನ್ ಆಫ್ ಇಂಡಿಯಾ' ಆರೋಪಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, 'ಇತರ ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡುವ ವಾಣಿಜ್ಯಾತ್ಮಕ ಭಾಷಣಕ್ಕೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅನ್ವಯಿಸುವುದಿಲ್ಲ' ಎಂದು ಹೇಳಿದೆ.
'ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು. ಕಟೆಂಟ್ ಹೆಸರಿನಲ್ಲಿ ವ್ಯಕ್ತಿಗಳ ಘನತೆಯನ್ನು ಬಲಿಕೊಡಲು ಸಾಧ್ಯವಿಲ್ಲ' ಎಂದಿದೆ.
ಇದೇ ವೇಳೆ, ಅಂಗವಿಕಲರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಅಪಹಾಸ್ಯ ಮಾಡುವ ಭಾಷಣಗಳನ್ನು ತಡೆಯಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.




