ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿ ಭೇಟಿ ನೀಡಿದ ನಂತರ ಗಗನಯಾನಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭಾನುವಾರ ಬೆಳಗಿನ ಜಾವ ಭಾರತಕ್ಕೆ ಮರಳಿದರು.
ಕಳೆದ ಒಂದು ವರ್ಷದಿಂದ ಶುಭಾಂಶು ಅವರು ಅಮೆರಿಕದಲ್ಲಿದ್ದು ಆಕ್ಸಿಯಂ-4 ಯೋಜನೆಯ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಶುಕ್ಲಾ ಅವರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಸ್ವಾಗತಿಸಿದರು.
ಶುಕ್ಲಾ ಅವರೊಂದಿಗೆ ಮತ್ತೊಬ್ಬ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ತಾಯ್ನಾಡಿಗೆ ಮರಳಿದರು. ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ನಂತರ ತಮ್ಮ ಊರು ಉತ್ತರಪ್ರದೇಶದ ಲಖನೌಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಾದ ನಂತರ ದೆಹಲಿಯಲ್ಲಿ ಆ. 22 ಹಾಗೂ 23ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ
2027ರಲ್ಲಿ ಇಸ್ರೊ ಕೈಗೊಳ್ಳಲು ಉದ್ದೇಶಿಸಿರುವ ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ನಾಸಾ ಜತೆಗೂಡಿ ನಡೆಸಿದ ಮಾನವ ಸಹಿತ ಬಾಹ್ಯಾಕಾಶ ಯಾನದಲ್ಲಿ ಶುಭಾಂಶು ಶುಕ್ಲ ಅವರು ಇತರ ಮೂವರು ಗಗನಯಾನಿಗಳೊಂದಿಗೆ ಪಾಲ್ಗೊಂಡಿದ್ದರು.
ಭಾರತದ ಆದರ್ಶ ಪುತ್ರ, ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬೆಳಗಿನ ಜಾವ ದೆಹಲಿಗೆ ಬಂದಿಳಿದರು. ಇವರೊಂದಿಗೆ ಮತ್ತೊಬ್ಬ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಮರಳಿದರು. ಎಂದು ಜಿತೇಂದ್ರ ಸಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.




