ನವದೆಹಲಿ: ವಿಜೇತ ಅಭ್ಯರ್ಥಿಯು ಆಸ್ತಿ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂಬ ಕಾರಣಕ್ಕಾಗಿ, ನ್ಯಾಯಾಲಯಗಳು ಅತ್ಯಂತ ನಿಷ್ಠುರ ಮತ್ತು ಅತಿಸೂಕ್ಷ್ಮ ವಿಧಾನವನ್ನು ಅಳವಡಿಸಿಕೊಂಡು ಚುನಾವಣೆಯ ಫಲಿತಾಂಶವನ್ನು ಅಸಿಂಧುಗೊಳಿಸಲು ಆತುರಪಡಬಾರದು ಎಂಬ ಮಹತ್ವದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಸೋಮವಾರ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, ನಿರ್ದಿಷ್ಟ ಅಭ್ಯರ್ಥಿಯು ಆಸ್ತಿ ವಿವರ ಬಹಿರಂಗಪಡಿಸದಿರುವುದು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವಷ್ಟು ಗಂಭೀರ ಸ್ವರೂಪದ್ದಾಗಿತ್ತೇ ಎಂಬುದನ್ನು ನ್ಯಾಯಾಲಯಗಳು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
2023ರ ಡಿಸೆಂಬರ್ 3ರಂದು ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್‌ನ ಕೋವ ಲಕ್ಷ್ಮಿ ಅವರ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಅಜ್ಮೇರಾ ಶ್ಯಾಮ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.
ಗೆದ್ದ ಅಭ್ಯರ್ಥಿಯು ಕಳೆದ ಐದು ವರ್ಷಗಳಲ್ಲಿ ನಾಲ್ಕು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ಬಹಿರಂಗಪಡಿಸದಿರುವುದು ಗಂಭೀರ ಸ್ವರೂಪದ ದೋಷ ಅಲ್ಲ ಎಂದು ಪೀಠವು ಹೇಳಿದೆ.
ಅರ್ಜಿ ವಜಾ: 2024ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಚೇತನ್ ಚಂದ್ರಕಾಂತ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರ ಪೀಠ ನಿರಾಕರಿಸಿತು.
ಮತದಾನದ ದಿನ ಸಂಜೆ 6 ಗಂಟೆಯ ನಂತರ ಮತದಾನ ಮುಗಿಯುವವರೆಗೆ 76 ಲಕ್ಷ ಮತಗಳು ಚಲಾವಣೆಯಾಗಿವೆ ಎಂಬ ಕಾರಣ ಮುಂದಿಟ್ಟು ಚೇತನ್ ಅವರು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇದೇ ಜೂನ್ 25ರಂದು ತಿರಸ್ಕರಿಸಿತ್ತು.




