HEALTH TIPS

ಜಿನ್ನಾ, ಕಾಂಗ್ರೆಸ್, ಮೌಂಟ್‌ ಬ್ಯಾಟನ್‌ ದೇಶ ವಿಭಜನೆಯ ಅಪರಾಧಿಗಳು: NCERT ಪಠ್ಯ

ನವದೆಹಲಿ: ದೇಶದ ವಿಭಜನೆಗೆ ಮೊಹಮ್ಮದ್‌ ಅಲಿ ಜಿನ್ನಾ, ಕಾಂಗ್ರೆಸ್ ಮತ್ತು ಅಂದಿನ ವೈಸ್‌ರಾಯ್‌ ಲಾರ್ಡ್‌ ಮೌಂಟ್‌ ಬ್ಯಾಟನ್‌ ಕಾರಣ ಎಂದು 'ದೇಶ ವಿಭಜನೆಯ ಕರಾಳ ನೆನಪಿನ ದಿನ'ದ ಭಾಗವಾಗಿ ಎನ್‌ಸಿಇಆರ್‌ಟಿ ಬಿಡಗುಡೆ ಮಾಡಿರುವ ವಿಶೇಷ ಪಠ್ಯಕ್ರಮದಲ್ಲಿ ಹೇಳಲಾಗಿದೆ.

'ವಿಭಜನೆ ನಂತರ ಕಾಶ್ಮೀರ ಎಂಬ ಹೊಸ ಸಮಸ್ಯೆ ಸೃಷ್ಟಿಯಾಯಿತು. ಹಿಂದೆಂದೂ ಇರದ ಈ ಸಮಸ್ಯೆ ಮುಂದೆ ದೇಶದ ವಿದೇಶಾಂಗ ನೀತಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಕಾಶ್ಮೀರದ ವಿಷಯವನ್ನೇ ಮುಂದೆ ಮಾಡಿಕೊಂಡು ಒತ್ತಡ ಸೃಷ್ಟಿಸುವಂತೆ ಪಾಕಿಸ್ತಾನಕ್ಕೆ ಕೆಲ ರಾಷ್ಟ್ರಗಳು ಈಗಲೂ ನೆರವು ನೀಡುತ್ತಿವೆ' ಎಂದೆನ್ನಲಾಗಿದೆ.

'ತಪ್ಪು ಆಲೋಚನೆಗಳ ಪರಿಣಾಮ ಭಾರತದ ವಿಭಜನೆಯಾಯಿತು. ಮುಸ್ಲಿಂ ಲೀಗ್ ಪಕ್ಷವು ಲಾಹೋರ್‌ನಲ್ಲಿ 1940ರಲ್ಲಿ ಭಾರತೀಯ ಮುಸ್ಲಿಮರ ಸಮ್ಮೇಳನ ಆಯೋಜಿಸಿತ್ತು. 'ಹಿಂದೂ ಹಾಗೂ ಮುಸ್ಲಿಮರು ಎರಡು ಭಿನ್ನ ಧಾರ್ಮಿಕ ತತ್ವ, ಸಾಮಾಜಿಕ ಪದ್ಧತಿ ಮತ್ತು ಸಾಹಿತ್ಯಗಳನ್ನು ಹೊಂದಿದವರು' ಎಂದು ಪಕ್ಷದ ನಾಯಕ ಮೊಹಮ್ಮದ್ ಅಲಿ ಜಿನ್ನಾ ಹೇಳಿದ್ದರು' ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.

ಇದೇ ಪಠ್ಯಕ್ರಮದ 'ವಿಭಜನೆಯ ಅಪರಾಧಿಗಳು' ಎಂಬ ಭಾಗದಲ್ಲಿ, '1947ರ ಆ. 15ರಂದು ಭಾರತ ವಿಭಜನೆಗೊಂಡಿತು. ಇದು ಯಾವುದೋ ಒಬ್ಬ ವ್ಯಕ್ತಿ ಮಾಡಿದ ಕೆಲಸದಿಂದಲ್ಲ. ಇದರಲ್ಲಿ ಮೂವರು ಒಳಗೊಂಡಿದ್ದಾರೆ. ಬೇಡಿಕೆ ಮುಂದಿಟ್ಟ ಜಿನ್ನಾ, ಅದನ್ನು ಒಪ್ಪಿಕೊಂಡ ಕಾಂಗ್ರೆಸ್ ಮತ್ತು ಜಾರಿಗೆ ತಂದ ಮೌಂಟ್‌ ಬ್ಯಾಟನ್‌ ಇದರ ಅಪರಾಧಿಗಳು. ಆದರೆ ಮೌಂಟ್‌ಬ್ಯಾಟನ್‌ ಒಬ್ಬರೇ ಅಪರಾಧಿ ಎಂದು ಹೇಳಿದ್ದೇ ದೊಡ್ಡ ಪ್ರಮಾದ' ಎಂದೆನ್ನಲಾಗಿದೆ.

'1948ರ ಜೂನ್‌ನಲ್ಲಿ ಅಧಿಕಾರ ಹಸ್ತಾಂತರದ ದಿನಾಂಕವನ್ನು ಅವಧಿಗೆ ಮೊದಲೇ 1947ರ ಆಗಸ್ಟ್‌ಗೆ ನಿಗದಿಪಡಿಸಿದ್ದು ಮೌಂಟ್‌ ಬ್ಯಾಟನ್‌. ಇದಕ್ಕೆ ಎಲ್ಲರ ಒಪ್ಪಿಗೆಯನ್ನೂ ಇವರು ಪಡೆದರು. ಹೀಗಾಗಿ ವಿಭಜನೆಗೆ ಅಗತ್ಯ ಕಾಲಾವಕಾಶ ಸಿಗಲಿಲ್ಲ. ದೇಶದ ಗಡಿಭಾಗ ಗುರುತಿಸುವಿಕೆ ಪ್ರಕ್ರಿಯೆಯೂ ಸರಿಯಾಗಲಿಲ್ಲ. ಗಡಿ ಗುರುತಿಸಲು ಸರ್‌ ಕ್ರಿಲ್‌ ರ್ಯಾಡ್‌ಕ್ಲಿಫ್‌ಗೆ ಕೇವಲ ಐದು ವಾರಗಳ ಕಾಲಾವಕಾಶ ನೀಡಲಾಗಿತ್ತು' ಎಂದು ಹೇಳಲಾಗಿದೆ.

'1947ರ ಆಗಸ್ಟ್‌ 15ರ ನಂತರ ಪಂಜಾಬ್‌ ಪ್ರಾಂತ್ಯದಲ್ಲಿ ಲಕ್ಷಗಟ್ಟಲೆ ಜನರು ತಾವು ಭಾರತದಲ್ಲಿದ್ದೀವಾ ಅಥವಾ ಪಾಕಿಸ್ತಾನದಲ್ಲೇ ಎಂಬುದು ತಿಳಿಯದಾಗಿತ್ತು. ಜಾಗರೂಕತೆಯೇ ಇಲ್ಲದ ದೊಡ್ಡ ಪ್ರಮಾದ ಅದಾಗಿತ್ತು. 'ಈ ಘಟನೆ ನಡೆಯುತ್ತದೆ ಅಥವಾ ತನ್ನ ಜೀವಿತಾವಧಿಯಲ್ಲಿ ಪಾಕಿಸ್ತಾನ ರಚನೆಯಾಗಲಿದೆ ಎಂಬುದನ್ನು ಕನಸಿನಲ್ಲೂ ಎಣಿಸಿರಲಿಲ್ಲ. ನಂತರದ ದಿನಗಳಲ್ಲಿ ವಿಭಜನೆ ಆಗಬಾರದಿತ್ತು ಎಂದು ಅವರೇ ಹೇಳಿದ್ದರು' ಎಂದು ಜಿನ್ನಾ ಹೇಳಿರುವುದನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

'ವಿಭಜನೆ ಸಂದರ್ಭದಲ್ಲಿ ಭಾರತದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಭಾರತ ನಿಜಕ್ಕೂ ಯುದ್ಧ ಭೂಮಿಯಾಗಿದೆ. ನಾಗರಿಕ ಯುದ್ಧದ ಬದಲಾಗಿ ದೇಶ ವಿಭಜನೆ ಆದರೆ ಉತ್ತಮ' ಎಂದು ಸರ್ದಾರ್ ವಲ್ಲಭಾಬಾಯಿ ಪಟೇಲ್ ಹೇಳಿದ್ದನ್ನೂ ಇದರಲ್ಲಿ ದಾಖಲಿಸಲಾಗಿದೆ.

ವಿಭಜನೆಯನ್ನು ಮಹಾತ್ಮಾ ಗಾಂಧಿ ವಿರೋಧಿಸಿದರೂ, ಹಿಂಸಾಚಾರದ ಮೂಲಕ ಕಾಂಗ್ರೆಸ್ ನಿರ್ಧಾರವನ್ನು ವಿರೋಧಿಸುವಲ್ಲಿ ಅವರು ವಿಫಲರಾದರು. ನಾನು ವಿಭಜನೆಯ ಪರವಾಗಿಲ್ಲ. ಆದರೆ ಹಿಂಸಾಚಾರದ ಮೂಲಕ ಅದನ್ನು ಪಡೆಯುವ ಕಾಂಗ್ರೆಸ್ ಅನ್ನು ತಡೆಯುವುದಿಲ್ಲ' ಎಂದಿದ್ದರು ಎಂದು ಈ ವಿಭಾಗದಲ್ಲಿ ಹೇಳಲಾಗಿದೆ.

6 ರಿಂದ 8ನೇ ತರಗತಿಯ ಪಠ್ಯಗಳಿಗೆ ಎರಡು ಭಾಗಗಳಾಗಿ ಎನ್‌ಸಿಇಆರ್‌ಟಿ ಈ ಪಠ್ಯಕ್ರಮವನ್ನು ಸಿದ್ಧಪಡಿಸಿದೆ. 9ರಿಂದ 12ನೇ ತರಗತಿವರೆಗೆ ಮತ್ತೊಂದು ಭಾಗವಾಗಿ ಇದನ್ನು ನೀಡಲಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪಠ್ಯಪುಸ್ತಕದ ಭಾಗವಲ್ಲದಿದ್ದರೂ ಇದನ್ನು ಪೂರಕ ಪಠ್ಯಗಳಾಗಿ ನೀಡಲಾಗಿದೆ. ಇದನ್ನು ಪ್ರಾಜೆಕ್ಟ್‌ಗಳಾಗಿ, ಪೋಸ್ಟರ್‌, ಚರ್ಚೆಯ ಮೂಲಕ ಇದರ ಅಧ್ಯಯನಕ್ಕೆ ಶಿಫಾರಸು ಮಾಡಿದೆ.

'ದೇಶ ವಿಭಜನೆಯ ಕರಾಳ ನೆನಪಿನ ದಿನ'ದ ಅಂಗವಾಗಿ 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶದೊಂದಿಗೆ ಈ ಎರಡೂ ಪುಸ್ತಕಗಳು ಆರಂಭಗೊಳ್ಳುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries