ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷೆ ಮಂಡಳಿಯು (NBEMS) ಪ್ರಸಕ್ತ ಸಾಲಿನ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಇಂದು (ಭಾನುವಾರ, ಆಗಸ್ಟ್ 3ರಂದು) ನಡೆಸಿದ 'ನೀಟ್- ಪಿಜಿ' ಪರೀಕ್ಷೆಗೆ 2 ಲಕ್ಷದ 42 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದಾರೆ ಎಂದು ವರದಿಯಾಗಿದೆ.
ಮೇ 30ರಂದು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದಂತೆ ದೇಶದ 301 ನಗರಗಳ, 1,052 ಕೇಂದ್ರಗಳಲ್ಲಿ ಒಂದೇ ಪಾಳಿಯಲ್ಲಿ (ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ) ಪರೀಕ್ಷೆ ನಡೆದಿದೆ.
ಅಕ್ರಮಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಆಧಾರಿತವಾಗಿ ನಡೆದ ಅತಿದೊಡ್ಡ ಪರೀಕ್ಷೆ ಇದಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ, ಸೈಬರ್ ಭದ್ರತೆ ಹಾಗೂ ಯಾವುದೇ ಕೇಂದ್ರಕ್ಕೆ ವಿದ್ಯುತ್ ಸರಬರಾಜು ವ್ಯತ್ಯಯವಾಗದಂತೆ ನೋಡಿಕೊಳ್ಳಲು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರುಗಳಿಗೆ NBEMS ಪತ್ರ ಬರೆದಿತ್ತು. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾಡಳಿತಗಳು, ಪೊಲೀಸರ ಸಹಕಾರವನ್ನೂ ಕೋರಿತ್ತು.




