ನವದೆಹಲಿ: 'ನೀವು ನಿಜವಾದ ಭಾರತೀಯರಾಗಿದ್ದರೆ, ಅಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ' ಎಂದು 2022ರ ಭಾರತ್ ಜೋಡೊ ಯಾತ್ರೆ ವೇಳೆ ಭಾರತೀಯ ಸೇನೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.
ಆದಾಗ್ಯೂ, ಲಖನೌ ನ್ಯಾಯಾಲಯದಲ್ಲಿ ಆರಂಭವಾಗಿರುವ ರಾಹುಲ್ ಗಾಂಧಿ ವಿರುದ್ಧದ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಪ್ರಕರಣ ಸಂಬಂಧ ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಅಗಸ್ಟಿನ್ ಜಾರ್ಜ್ ನೇತೃತ್ವದ ಪೀಠವು ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಕರಣದ ದೂರುದಾರರಿಗೆ ನೋಟಿಸ್ ಜಾರಿ ಮಾಡಿದೆ.
'ನೀವು ವಿರೋಧ ಪಕ್ಷದ ನಾಯಕರಿದ್ದೀರಿ... ಸಂಸತ್ತಿನಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಏಕೆ ಪ್ರಸ್ತಾಪಿಸಿದ್ದೀರಿ. ನಮ್ಮ ದೇಶದ 2,000 ಚದರ ಕಿ.ಮೀ ಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆ ಎಂಬುದು ನಿಮಗೆ ಹೇಗೆ ತಿಳಿಯುತ್ತದೆ? ನೀವು ಅಲ್ಲಿದ್ದೀರಾ? ನಿಮ್ಮ ಬಳಿ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯವಿದೆಯೇ' ಎಂದು ರಾಹುಲ್ ಗಾಂಧಿ ಅವರನ್ನು ನ್ಯಾಯಪೀಠ ಪ್ರಶ್ನಿಸಿದೆ.
'ಯಾವುದೇ ಸಾಕ್ಷ್ಯವಿಲ್ಲದೆ ನೀವು ಈ ಹೇಳಿಕೆಗಳನ್ನು ಏಕೆ ನೀಡುತ್ತೀರಿ? ನೀವು ನಿಜವಾದ ಭಾರತೀಯರಾಗಿದ್ದರೆ, ಅಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ' ಎಂದೂ ನ್ಯಾಯಪೀಠ ಕುಟುಕಿದೆ.
ಗಾಂಧಿಯವರ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮಾತನಾಡಿ, 'ರಾಹುಲ್ ಗಾಂಧಿಯವರು ಉತ್ತಮ ರೀತಿಯಲ್ಲಿ ಹೇಳಿಕೆಗಳನ್ನು ನೀಡಬಹುದಿತ್ತು ಎಂದು ಒಪ್ಪಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 223 ಅನ್ನು ಉಲ್ಲೇಖಿಸಿದ ಸಿಂಘ್ವಿ, 'ನ್ಯಾಯಾಲಯವು ಕ್ರಿಮಿನಲ್ ಪ್ರಕರಣವನ್ನು ಪರಿಗಣಿಸುವ ಮುನ್ನ ಆರೋಪಿಗಳ ಪೂರ್ವ ವಿಚಾರಣೆಯನ್ನು ಕಡ್ಡಾಯವಾಗಿ ಮಾಡಬೇಕಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಇದನ್ನು ಮಾಡಲಾಗಿಲ್ಲ' ಎಂದು ವಾದಿಸಿದ್ದಾರೆ.
ಮೇ 29ರಂದು ಅಲಹಾಬಾದ್ ಹೈಕೋರ್ಟ್ ರಾಹುಲ್ ಗಾಂಧಿ ಅರ್ಜಿಯನ್ನು ವಜಾಗೊಳಿಸಿತ್ತು.
ಪ್ರಕರಣವೇನು?
2022ರ ಡಿಸೆಂಬರ್ 16ರಂದು ಭಾರತ್ ಜೋಡೊ ಯಾತ್ರೆಯ ವೇಳೆ ರಾಹುಲ್ ಗಾಂಧಿಯವರು ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಉದಯ್ ಶಂಕರ್ ಶ್ರೀವಾಸ್ತವ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಭಾರತ ಹಾಗೂ ಚೀನಾ ಸೇನಾಪಡೆಗಳ ನಡುವೆ 2022ರ ಡಿಸೆಂಬರ್ 9ರಂದು ನಡೆದಿದ್ದ ಸಂಘರ್ಷದ ಕುರಿತು ಮಾಧ್ಯಮವರೊಂದಿಗೆ ಮಾತನಾಡುತ್ತಾ ರಾಹುಲ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ವಿವೇಕ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.




