ವಾಷಿಂಗ್ಟನ್: ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಕುರಿತು ಮಾತುಕತೆ ನಡೆಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆಗಸ್ಟ್ 15ರಂದು ಅಲಾಸ್ಕಾದಲ್ಲಿ ಭೇಟಿ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಒಡೆತನದ 'ಟ್ರುತ್' ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
'ಮೂರು ವರ್ಷಗಳ ಸಂಘರ್ಷವನ್ನು ಕೊನೆಗಾಣಿಸುವ ಕದನ ವಿರಾಮ ಒಪ್ಪಂದಕ್ಕೆ ಹತ್ತಿರದಲ್ಲಿದ್ದೆವೆ' ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, 'ಇದು ತುಂಬಾ ಜಟಿಲವಾಗಿದೆ. ಎರಡು ಕಡೆಯವರ ಒಳಿತಿಗಾಗಿ ಕೆಲವು ಪ್ರದೇಶಗಳನ್ನು ವಿನಿಯಮ ಮಾಡಿಕೊಳ್ಳಲಾಗುವುದು' ಎಂದು ಹೇಳಿದ್ದಾರೆ.
ಏತನ್ಮಧ್ಯೆ, 'ರಷ್ಯಾ ಮೇಲೆ ಸಾಕಷ್ಟು ಒತ್ತಡ ಹೇರಿದರೆ ಕದನ ವಿರಾಮ ಸಾಧಿಸಲು ಸಾಧ್ಯವಾಗುತ್ತದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ರಾಷ್ಟ್ರವನ್ನುದ್ದೇಶಿಸಿ ಶುಕ್ರವಾರ ಸಂಜೆ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.
ಉಕ್ರೇನ್ ನಾಲ್ಕು ಪ್ರಮುಖ ಪ್ರದೇಶಗಳಾದ ಲುಗಾನ್‌ಸ್ಕ್, ಡೊನೆಟ್‌ಸ್ಕ್, ಝಪೊರಿಝಿಯಾ ಮತ್ತು ಖೆರ್ಸನ್ ಮತ್ತು 2014ರಲ್ಲಿ ಸ್ವಾಧೀನಪಡಿಸಿಕೊಂಡ ಕ್ರೈಮಿಯಾ ತಮ್ಮ ವಶದಲ್ಲಿರುವುದಾಗಿ ಪುಟಿನ್ ಹೇಳಿದ್ದಾರೆ. ಆದರೆ, ಕ್ರೈಮಿಯಾ ಹೊರತುಪಡಿಸಿ ಉಳಿದ ನಾಲ್ಕು ಪ್ರದೇಶಗಳಲ್ಲಿ ರಷ್ಯಾದ ಪಡೆಗಳು ಸಂಪೂರ್ಣ ನಿಯಂತ್ರವನ್ನು ಹೊಂದಿಲ್ಲ.
ಟ್ರಂಪ್-ಪುಟಿನ್ ಭೇಟಿ ಕುರಿತು ಉಕ್ರೇನ್‌ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.




