ವಿಶ್ವಸಂಸ್ಥೆ: ಅಮೆರಿಕ ಹೊರತುಪಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಳಿದೆಲ್ಲ ಸದಸ್ಯ ರಾಷ್ಟ್ರಗಳು ಗಾಜಾದಲ್ಲಿ ತಲೆದೋರಿರುವ ಹಾಹಾಕಾರವು 'ಮಾನವ ನಿರ್ಮಿತ ಬಿಕ್ಕಟ್ಟು' ಎಂದು ಪ್ರತಿಪಾದಿಸಿವೆ. ಹಾಗೆಯೇ, ಹಸಿವನ್ನು ಯುದ್ಧದ ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ನಿಷಿದ್ಧ ಎಂದು ಎಚ್ಚರಿಸಿವೆ.
UNSCನ 15 ಸದಸ್ಯ ರಾಷ್ಟ್ರಗಳ ಪೈಕಿ ಅಮೆರಿಕ ಹೊರತುಪಡಿಸಿ ಉಳಿದೆಲ್ಲ ದೇಶಗಳು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 'ಬೇಷರತ್, ಶಾಶ್ವತ ಕದನ ವಿರಾಮ ಘೋಷಿಸಬೇಕು. ಹಮಾಸ್ ಮತ್ತು ಇತರ ಗುಂಪುಗಳ ವಶದಲ್ಲಿರುವ ಒತ್ತೆಯಾಳುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಗಾಜಾದಾದ್ಯಂತ ಸಹಾಯದ ಹಸ್ತ ಚಾಚಬೇಕು. ಗಾಜಾಗೆ ನೆರವು ವಿತರಣೆ ಮೇಲೆ ಇಸ್ರೇಲ್ ಹೇರಿರುವ ಎಲ್ಲ ನಿರ್ಬಂಧಗಳನ್ನು ಕೂಡಲೇ ತೆಗೆದುಹಾಕಬೇಕು' ಎಂದು ಕರೆ ನೀಡಿವೆ.
'ಗಾಜಾದಲ್ಲಿನ ಆಹಾರ ಕ್ಷಾಮ ಕೂಡಲೇ ನಿಲ್ಲಬೇಕು. ಮಾನವೀಯ ತುರ್ತು ಪರಿಸ್ಥಿತಿಯನ್ನು ತಡಮಾಡದೆ ತೊಡೆದುಹಾಕಬೇಕು. ಇಸ್ರೇಲ್ ತನ್ನ ಹಾದಿಯನ್ನು ಬದಲಿಸಿಕೊಳ್ಳಬೇಕಾಗಿದೆ' ಎಂದು ಒತ್ತಾಯಿಸಿವೆ.
ಗಾಜಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ತೀವ್ರ ಆಹಾರ ಬಿಕ್ಕಟ್ಟು ಉಂಟಾಗಿದೆ. ಅದು ಇತರ ಪ್ರದೇಶಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ ಎಂದು ಜಾಗತಿಕ ಹಸಿವು ಮೇಲ್ವಿಚಾರಣಾ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಗಾಜಾದಲ್ಲಿರುವ ನಾಲ್ಕನೇ ಒಂದರಷ್ಟು ಪ್ಯಾಲೆಸ್ಟೀನಿಯನ್ನರು (ಸುಮಾರು 5.14 ಲಕ್ಷ ಜನರು) ತೀವ್ರ ಕ್ಷಾಮ ಅನುಭವಿಸುತ್ತಿದ್ದಾರೆ. ಅದು, ಸೆಪ್ಟೆಂಬರ್ ಅಂತ್ಯದ ಹೊತ್ತಿಗೆ 6.41 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು 'ಸಮಗ್ರ ಆಹಾರ ಭದ್ರತಾ ಹಂತಗಳ ವರ್ಗೀಕರಣ' (ಐಪಿಸಿ) ಅಂದಾಜಿಸಿದೆ.
ಐಪಿಸಿ ವರದಿಯನ್ನು ಇಸ್ರೇಲ್ ಅಲ್ಲಗಳೆದಿದೆ. ಗಾಜಾ ನೀಡಿದ ದತ್ತಾಂಶಗಳನ್ನು ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ. ಇದು ಸುಳ್ಳು ಮತ್ತು ಪಕ್ಷಪಾತದಿಂದ ಕೂಡಿದ ವರದಿಯಾಗಿದ್ದು, ಗಾಜಾಗೆ ಇತ್ತೀಚೆಗೆ ಆಹಾರ ಪೂರೈಕೆಯಾಗಿರುವುದನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದೆ.
ವಿಶ್ವಸಂಸ್ಥೆಯಲ್ಲಿ ಅಮೆರಿಕದ ಹಂಗಾಮಿ ರಾಯಭಾರಿಯಾಗಿರುವ ಡೊರೊಥಿ ಶಿಯಾ ಅವರು, ಐಪಿಸಿ ವರದಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದಾರೆ.
'ಗಾಜಾದಲ್ಲಿ ಹಸಿವು ನಿಜವಾದ ಸಮಸ್ಯೆಯಾಗಿದೆ ಮತ್ತು ಮಾನವೀಯ ನೆರವು ಪೂರೈಕೆಯಾಗಬೇಕಿದೆ ಎಂಬುದನ್ನು ನಾವೆಲ್ಲ ಒಪ್ಪುತ್ತೇವೆ. ಸಮಸ್ಯೆಗಳನ್ನು ಪರಿಹರಿಸುವುದು ಅಮೆರಿಕದ ಆದ್ಯ ವಿಚಾರವಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.




