ನಿಂಗ್ಬೊ : ಚೀನಾದ ನಿಂಗ್ಬೊ ನಗರದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ರೈಫಲ್/ಪಿಸ್ತೂಲ್ ಪಂದ್ಯಾವಳಿಯಲ್ಲಿ ಶನಿವಾರ ಒಲಿಂಪಿಯನ್ ಇಶಾ ಸಿಂಗ್ ಚಿನ್ನವನ್ನು ಗೆದ್ದುಕೊಂಡಿದ್ದಾರೆ.
ನಿಂಗ್ಬೊ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಜಿದ್ದಾಜಿದ್ದಿನ ಫೈನಲ್‌ನಲ್ಲಿ, 20 ವರ್ಷದ ಇಶಾ ಸಿಂಗ್ ಚೀನಾದ ಯಾವೊ ಕಿಯನ್‌ಕ್ಸನ್‌ರನ್ನು 0.1 ಅಂಕದ ತೆಳು ಅಂತರದಿಂದ ಸೋಲಿಸಿದರು.
ಹಾಲಿ ಒಲಿಂಪಿಕ್ ಚಾಂಪಿಯನ್ ದಕ್ಷಿಣ ಕೊರಿಯದ ಓಹ್ ಯೆಜಿನ್ ಕಂಚು ಗೆದ್ದರು.
ಇದು ಈ ವಿಭಾಗದಲ್ಲಿ ಇಶಾರ ಚೊಚ್ಚಲ ವಿಶ್ವಕಪ್ ಚಿನ್ನ ಆಗಿದೆ. ಇದರೊಂದಿಗೆ, ಪದಕ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನಕ್ಕೆ ಏರಿತು. ಪದಕ ಪಟ್ಟಿಯಲ್ಲಿ, ಎರಡು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳೊಂದಿಗೆ ಆತಿಥೇಯ ಚೀನಾ ಮೊದಲ ಸ್ಥಾನದಲ್ಲಿದೆ.
ಭಾರತವು ಈ ಪಂದ್ಯಾವಳಿಯ ಪ್ರತಿ ವಿಭಾಗದಲ್ಲಿ ನಾಲ್ಕರಿಂದ ಆರನೇ ರ್ಯಾಂಕ್ ಹೊಂದಿರುವ ತನ್ನ ಶೂಟರ್‌ಗಳನ್ನು ಕಣಕ್ಕಿಳಿಸಿದೆ.
''ಪಂದ್ಯಾವಳಿಯಲ್ಲಿ ಈ ವಿಭಾಗದಲ್ಲಿ ನಾನು ಸ್ಪರ್ಧಿಸಿರುವುದು ಮೊದಲ ಬಾರಿಯಾಗಿದೆ. ಇದರಲ್ಲಿ ಚಿನ್ನ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ಕೆಲವು ಗುರಿಗಳು ಈಡೇರಿರುವುದನ್ನು ಕಂಡು ತೃಪ್ತಿಯಾಗಿದೆ'' ಎಂದು ವಿಜಯದ ಬಳಿಕ ಮಾತನಾಡಿದ ಅವರು ಹೇಳಿದರು.




