HEALTH TIPS

ನೇಪಾಳ | ಸಾಮಾಜಿಕ ಜಾಲತಾಣ ನಿಷೇಧ ಖಂಡಿಸಿ ಪ್ರತಿಭಟನೆ: 19 ಸಾವು

ಕಠ್ಮಂಡು: ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಾಪಸ್ ಪಡೆಯಬೇಕು ಮತ್ತು ಭ್ರಷ್ಟಾಚಾರ ನಿಯಂತ್ರಿಸುವಂತೆ ಆಗ್ರಹಿಸಿ ಯುವಕರು ಇಲ್ಲಿ ನಡೆಸಿದ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿತು. ಈ ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯುವಕರು ಕಠ್ಮಂಡುವಿನಲ್ಲಿ 'ಜೆನ್‌-ಝೀ' ಬ್ಯಾನರ್‌ ಅಡಿಯಲ್ಲಿ ‍ಪ್ರತಿಭಟನೆ ನಡೆಸಿದರು.

'ಭ್ರಷ್ಟಾಚಾರವನ್ನು ನಿಯಂತ್ರಿಸಿ, ಸಾಮಾಜಿಕ ಜಾಲತಾಣಗಳನ್ನಲ್ಲ' ಎನ್ನುವ ಬರಹಗಳಿರುವ ಫಲಕಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ 20 ವರ್ಷ ವಯೋಮಾನದ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿಯೇ ಭಾಗವಹಿಸಿದ್ದರು.

ಕೆಲವು ಪ್ರತಿಭಟನಕಾರರು ಸಂಸತ್‌ ಭವನದ ಆವರಣಕ್ಕೆ ನುಗ್ಗಲು ಯತ್ನಿಸಿದರು. ಇನ್ನೂ ಕೆಲವರು ಸಂಸತ್‌ ಭವನದ ತಡೆಗೋಡೆಗಳನ್ನು ಏರಿ ಗೇಟುಗಳನ್ನು ಧ್ವಂಸಗೊಳಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ‍ಪ್ರಹಾರ ನಡೆಸಿದರು. ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಜಲಫಿರಂಗಿ, ರಬ್ಬರ ಬುಲೆಟ್, ಅಶ್ರುವಾಯು ಪ್ರಯೋಗಿಸಿದರು.

ಆಯಂಬುಲೆನ್ಸ್‌ಗೆ ಬೆಂಕಿ:

ಪೊಲೀಸರು ಲಾಠಿ ಪ್ರಹಾರ ಮಾಡುತ್ತಿದ್ದಂತೆಯೇ ಸಿಟ್ಟಿಗೆದ್ದ ಪ್ರತಿಭಟನಕಾರರು ಸಂಸತ್‌ ಭವನದ ಎದುರಿಗಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಲು ಯತ್ನಿಸಿದರು. ಅಲ್ಲದೇ, ಆಯಂಬುಲೆನ್ಸ್‌ಗೆ ಬೆಂಕಿ ಹಚ್ಚಿದರು. ಜತೆಗೆ ಪೊಲೀಸರ ಮೇಲೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದು ದಾಂಧಲೆ ನಡೆಸಿದ್ದರಿಂದ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಿ ನಿಯಂತ್ರಣಕ್ಕೆ ತರಲು ಸರ್ಕಾರವು ಸೇನೆಯನ್ನು ನಿಯೋಜಿಸಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

'ಪೊಲೀಸರು ನಿರ್ದಾಕ್ಷಿಣ್ಯವಾಗಿ ಲಾಠಿ ಪ್ರಹಾರ ಮಾಡಿ, ರಬ್ಬರ್ ಬುಲೆಟ್‌ಗಳನ್ನು ಸಿಡಿಸಿದ್ದಾರೆ. ನಮ್ಮ ಹೋರಾಟ ಇಷ್ಟಕ್ಕೇ ನಿಲ್ಲದು ಇದು ನೇಪಾಳದ ಹೊಸ ಪೀಳಿಗೆಯ ಪ್ರತಿಭಟನೆ' ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಕರ್ಫ್ಯೂ ಜಾರಿ:

ಸಂಸತ್‌ ಭವನದ ಸುತ್ತಮುತ್ತ ಹಾಗೂ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ನಿವಾಸ ಸುತ್ತಮುತ್ತ ಸೇರಿದಂತೆ ನಗರದ ಹಲವು ಪ್ರಮುಖ ಸ್ಥಳಗಳಲ್ಲಿ ಕಠ್ಮಂಡು ಜಿಲ್ಲಾಡಳಿತವು ಕರ್ಫ್ಯೂ ಜಾರಿಗೊಳಿಸಿದೆ.

ನೇಪಾಳದ ಹಲವು ಜಿಲ್ಲೆಗಳಲ್ಲೂ ಯುವಕರು ಪ್ರತಿಭಟನೆ ನಡೆಸಿದರು. ವಿರಾಟ್‌ನಗರ, ಭರತ್‌ಪುರ ಹಾಗೂ ದಕ್ಷಿಣ ಮತ್ತು ಪಶ್ಚಿಮ ನೇಪಾಳದ ವಿವಿಧ ಪ್ರದೇಶಗಳಲ್ಲೂ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಪಿ.ಶರ್ಮಾ ಓಲಿ ನೇಪಾಳ ಪ್ರಧಾನಿನಾವು ಸಾಮಾಜಿಕ ಜಾಲತಾಣಗಳ ವಿರೋಧಿಗಳಲ್ಲ. ಆದರೆ ನೇಪಾಳದಲ್ಲೇ ಹಣ ಸಂಪಾದಿಸಿ ಇಲ್ಲಿನ ಕಾನೂನಿಗೆ ಬದ್ಧರಾಗುವುದಿಲ್ಲ ಎನ್ನುವವರನ್ನು ಸಹಿಸಲೂ ಸಾಧ್ಯವಿಲ್ಲಇಕ್ಷಮಾ ತುಮ್ರೋಕ್‌ ವಿದ್ಯಾರ್ಥಿನಿನಾವು ಬದಲಾವಣೆ ಬಯಸುತ್ತಿದ್ದೇವೆ. ಭ್ರಷ್ಟಾಚಾರ ಮತ್ತು ಸರ್ವಾಧಿಕಾರದ ಆಡಳಿತವನ್ನು ಅಂತ್ಯಗೊಳಿಸಬೇಕಾಗಿದೆ. ಇದುವರೆಗೆ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಆದರೆ ಹೊಸ ಪೀಳಿಗೆ ಸಹಿಸಿಕೊಳ್ಳುವುದಿಲ್ಲ

ಪ್ರತಿಭಟನೆಗೆ ಕಾರಣವೇನು?:

ಫೇಸ್‌ಬುಕ್‌ ವ್ಯಾಟ್ಸ್‌ಆಯಪ್‌ ಯೂಟ್ಯೂಬ್‌ ಎಕ್ಸ್‌ ಸೇರಿದಂತೆ 26 ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಸೆ.5ರಂದು ನೇಪಾಳ ಸರ್ಕಾರ ನಿಷೇಧಿಸಿತ್ತು. ಸಚಿವ ಸಂಪುಟದಲ್ಲಿ ಇತ್ತೀಚೆಗೆ ಕೈಗೊಂಡ ನಿರ್ಧಾರದ ಅನ್ವಯ ಸಾಮಾಜಿಕ ಜಾಲತಾಣಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ನೋಂದಣಿಯಾಗದ ಕಾರಣಕ್ಕೆ ನೇಪಾಳ ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿತ್ತು. ನಕಲಿ ಖಾತೆಗಳ ಮೂಲಕ ದ್ವೇಷ ಭಾಷಣ ಸುಳ್ಳು ಸುದ್ದಿಯನ್ನು ಹಬ್ಬಿಸಲು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ನೇಪಾಳದ ಶೇ 90ರಷ್ಟು ಮಂದಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದು ಸರ್ಕಾರದ ನಿರ್ಣಯದಿಂದ ಯುವಜನರ ಆಕ್ರೋಶ ಹೆಚ್ಚಾದ ಪರಿಣಾಮ ಪ್ರತಿಭಟನೆಗಳು ನಡೆಯುತ್ತಿವೆ.

'ವಾಕ್‌ ಸ್ವಾತಂತ್ರ್ಯ ಹತ್ತಿಕ್ಕಲು ಯತ್ನ:

ಯುವಕರ ಆರೋಪ ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆ ನಿಷೇಧ ಹೇರುವ ಮೂಲಕ ಸರ್ಕಾರವು ಜನರ ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಯುವಜನರು ಆರೋಪಿಸಿದ್ದಾರೆ. ಇದಕ್ಕೆ ಪೂರಕವೆನ್ನುವಂತೆ ಟಿಕ್‌ಟಾಕ್‌ನಲ್ಲಿ 'ನೆಪೊ ಕಿಡ್‌' ಹೆಸರಿನ ಅಭಿಯಾನ ಶುರುವಾಗಿರುವುದು ಪ್ರತಿಭಟನಕಾರರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಜನ ಸಾಮಾನ್ಯರ ಮಕ್ಕಳ ಪರಿಸ್ಥಿತಿ ಹಾಗೂ ರಾಜಕಾರಣಿಗಳ ಮಕ್ಕಳ ಐಷಾರಾಮಿ ಬದುಕನ್ನು ಹೋಲಿಕೆ ಮಾಡುವಂಥ ವಿಡಿಯೊಗಳು 'ನೆಪೊ ಕಿಡ್‌' ಅಭಿಯಾನದ ಹೆಸರಿನಲ್ಲಿ ಟಿಕ್‌ಟಾಕ್‌ನಲ್ಲಿ ಹರಿದಾಡುತ್ತಿದೆ. ಇದು ರಾಜಕಾರಣಿಗಳ ಭ್ರಷ್ಟಾಚಾರದ ವಿರುದ್ಧ ಯುವಜನರ ಹೋರಾಟದ ಕಿಚ್ಚು ಹೆಚ್ಚಿಸಿದೆ. 'ನಮ್ಮ ಹೋರಾಟ ಕೇವಲ ಸಾಮಾಜಿಕ ಜಾಲತಾಣಗಳ ನಿಷೇಧ ಹಿಂಪಡೆಯುವುದಕ್ಕೆ ಅಲ್ಲ ಭ್ರಷ್ಟಾಚಾರದ ವಿರುದ್ಧ' ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries