ನವದೆಹಲಿ :ಮುಂದಿನ ವರ್ಷ ನಡೆಯಲಿರುವ ದೇಶದ ಪ್ರಪ್ರಥಮ ಸಂಪೂರ್ಣ ಡಿಜಿಟಲ್ ಜನಗಣತಿಯಲ್ಲಿ ಸುಮಾರು 34 ಲಕ್ಷ ಎಣಿಕೆದಾರರು ಈ ಪ್ರಕ್ರಿಯೆಯಲ್ಲಿ ತಮ್ಮದೇ ಆದ ಸ್ಮಾರ್ಟ್‌ಫೋನ್‌ಗಳು ಮತ್ತು ಅದಕ್ಕೆಂದೇ ಮೀಸಲಾದ ಮೊಬೈಲ್ ಆಯಪ್‌ಗಳನ್ನು ಬಳಸಲಿದ್ದಾರೆ ಎಂದು indianexpress.com ಬಲ್ಲ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಮೂಲಗಳ ಪ್ರಕಾರ ಭಾರತದ ರಿಜಿಸ್ಟ್ರಾರ್ ಜನರಲ್‌ರಿಂದ ನಿಯೋಜಿತ ಗಣತಿದಾರರು ದತ್ತಾಂಶಗಳನ್ನು ಸಂಗ್ರಹಿಸಲು ತಮ್ಮ ಸ್ವಂತ ಸಾಧನಗಳನ್ನು ಬಳಸುತ್ತಾರೆ ಮತ್ತು ಈ ದತ್ತಾಂಶಗಳನ್ನು ಮೊಬೈಲ್ ಆಯಪ್‌ಗಳ ಮೂಲಕ ಕೇಂದ್ರ ಸರ್ವರ್‌ಗೆ ವರ್ಗಾಯಿಸುತ್ತಾರೆ. ಆಯಪ್‌ಗಳು ಆಯಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರಲಿವೆ.
ಮೂಲಗಳ ಪ್ರಕಾರ ಯಾವುದೇ ಕಾರಣದಿಂದ ಗಣತಿದಾರರು ಕಾಗದದ ಮೇಲೆ ದತ್ತಾಂಶಗಳನ್ನು ಸಂಗ್ರಹಿಸಿದರೆ ಅವರು ಅದನ್ನು ಮೀಸಲಾದ ವೆಬ್ ಪೋರ್ಟಲ್‌ನಲ್ಲಿ ನಮೂದಿಸಬೇಕಾಗುತ್ತದೆ, ಇದರಿಂದಾಗಿ ನಂತರದ ಸ್ಕ್ಯಾನಿಂಗ್ ಅಥವಾ ದತ್ತಾಂಶ ನಮೂದು ಅಗತ್ಯವಾಗುವುದಿಲ್ಲ. ಅಂದರೆ ಜನಗಣತಿ ದತ್ತಾಂಶಗಳನ್ನು ಮೊದಲ ಬಾರಿಗೆ ಗಣತಿದಾರರ ಮಟ್ಟದಲ್ಲಿಯೇ ಡಿಜಿಟಲೀಕರಿಸಲಾಗುತ್ತದೆ ಮತ್ತು ಇದು ಸಕಾಲದಲ್ಲಿ ಮಾಹಿತಿ ಲಭ್ಯತೆಯನ್ನು ಖಚಿತಪಡಿಸುತ್ತದೆ
ಮನೆಪಟ್ಟಿ ಕಾರ್ಯಾಚರಣೆ ಮತ್ತು ಜನರ ಗಣತಿ ಈ ಎರಡೂ ಹಂತಗಳಲ್ಲಿ ಮೊಬೈಲ್ ಆಯಪಗಳನ್ನು ಬಳಸಲಾಗುವುದು.
ಜನಗಣತಿಯೊಂದಿಗೆ ಜಾತಿಗಣತಿಯನ್ನೂ ನಡೆಸಲಾಗುವುದು. ಜನರು ಸ್ವಯಂ ಎಣಿಕೆ ಸೌಲಭ್ಯದ ಆಯ್ಕೆಯನ್ನೂ ಹೊಂದಿರಲಿದ್ದಾರೆ.
2027ರ ಜನಗಣತಿಯಲ್ಲಿ ವಸತಿ ಮತ್ತು ವಸತಿಯೇತರ ಸೇರಿದಂತೆ ಎಲ್ಲ ಕಟ್ಟಡಗಳನ್ನು ಮೊದಲ ಬಾರಿಗೆ ಜಿಯೋ-ಟ್ಯಾಗಿಂಗ್ ಮಾಡಲಾಗುತ್ತದೆ.
ಜಿಯೋ-ಟ್ಯಾಗಿಂಗ್ ಭೌಗೋಳಿಕ ಮಾಹಿತಿ ವ್ಯವಸ್ಥೆ ನಕ್ಷೆಯಲ್ಲಿ ನಿರ್ದಿಷ್ಟ ಕಟ್ಟಡಕ್ಕೆ ವಿಶಿಷ್ಟ ಅಕ್ಷಾಂಶ-ರೇಖಾಂಶ ನಿರ್ದೇಶಾಂಕವನ್ನು ನಿಯೋಜಿಸುವ ಪ್ರಕ್ರಿಯೆಯಾಗಿದೆ.

