ತಿರುವನಂತಪುರಂ: ಕೇರಳದ ಕೊಚ್ಚಿಯ ಕಲಮಶ್ಶೇರಿಯಲ್ಲಿ 27 ಎಕರೆ ಪ್ರದೇಶದಲ್ಲಿ 'ನ್ಯಾಯಾಂಗ ನಗರ' ತಲೆ ಎತ್ತಲಿದೆ.
ಎಚ್‌ಎಂಟಿ ಲಿಮಿಟೆಟ್ ವಶದಲ್ಲಿರುವ 27 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕಮಲಶ್ಶೇರಿಯಲ್ಲಿ ಉದ್ದೇಶಿತ ನ್ಯಾಯಾಂಗ ನಗರ ನಿರ್ಮಾಣಕ್ಕೆ ಸಚಿವ ಸಂಪುಟವು ಬುಧವಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ಹೇಳಿದೆ.
ಯೋಜನೆಯ ಅನುಷ್ಠಾನಕ್ಕೆ ಬೇಕಾದ ಪ್ರಾಥಮಿಕ ಹೆಜ್ಜೆ ಇಡವ ಹಾಗೂ ಕೇಂದ್ರ ಸರ್ಕಾರದ ಬೆಂಬಲ ಪಡೆಯುವ ಹೊಣೆಗಾರಿಕೆಯನ್ನು ಗೃಹ ಇಲಾಖೆಗೆ ವಹಿಸಲಾಗಿದೆ ಎಂದು ಅದು ತಿಳಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 'ಕೇರಳ ಲೋಕಸೇವಾ ಹಕ್ಕು ಕಾಯ್ದೆ 2025'ರ ಕರಡು ಮಸೂದೆಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸಭೆ ನಡೆಸಲು ಹೊಸ ನಿಬಂಧನೆಗಳನ್ನು ಸೇರಿಸುವ ಕಾಯ್ದೆಗೂ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.




