ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಜಾರಿಗೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳನ್ನು ಸೆ.30ರೊಳಗೆ ಪೂರ್ಣಗೊಳಿಸುವಂತೆ ವಿವಿಧ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಸಭೆಯಲ್ಲಿ, ಮುಂದಿನ 10 ರಿಂದ 15 ದಿನಗಳಲ್ಲಿ ಎಸ್‌ಐಆರ್ ಜಾರಿಗೆ ಸಿದ್ಧರಾಗಿರುವಂತೆ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಸೂಚಿಸಿದ್ದರು. ಆದರೆ ಈಗ ಸೆಪ್ಟೆಂಬರ್ 30ರ ಅಂತಿಮ ಗಡುವನ್ನು ನಿಗದಿಪಡಿಸಲಾಗಿದೆ.
ಹಳೆಯ ಮತದಾರರ ಪಟ್ಟಿಗಳ ಬಳಕೆ:
ಕೊನೆಯ ಬಾರಿ ಪರಿಷ್ಕರಣೆ ಆಗಿರುವ ಮತದಾರರ ಪಟ್ಟಿಯನ್ನು ಅನೇಕ ರಾಜ್ಯಗಳು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿವೆ. ಹೆಚ್ಚಿನ ರಾಜ್ಯಗಳು 2002-2004ರ ಅವಧಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ್ದವು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2008ರಲ್ಲಿ ಕೊನೆಯ ಬಾರಿಗೆ 'ಎಸ್‌ಐಆರ್' ನಡೆದಿತ್ತು. ಅದೇ ಮತದಾರರ(2008ರ) ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.
ಉತ್ತರಾಖಂಡದಲ್ಲಿ ಕೊನೆಯ ಬಾರಿಗೆ 2006ರಲ್ಲಿ 'ಎಸ್‌ಐಆರ್ ನಡೆದಿದ್ದು, ಆ ವರ್ಷದ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.
ಇನ್ನು ಬಿಹಾರದ 2003ರ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪರಿಷ್ಕರಣೆಗಾಗಿ ಬಳಸುತ್ತಿದೆ. ಕರ್ನಾಟಕದಲ್ಲಿ 2002ರಲ್ಲಿ ಎಸ್‌ಐಆರ್ ನಡೆದಿತ್ತು. 23 ವರ್ಷಗಳ ನಂತರ ಮತ್ತೆ ಎಸ್‌ಐಆರ್ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 2002ರ ಮತದಾರರ ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಬಿಹಾರ ಮಾದರಿಯಲ್ಲೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ಕರ್ನಾಟಕ ಸಜ್ಜುಬಿಹಾರದ ನಂತರ ದೇಶದ ಉಳಿದ ರಾಜ್ಯಗಳಲ್ಲೂ 'ಎಸ್‌ಐಆರ್' ಜಾರಿಗೊಳಿಸುವುದಾಗಿ ಚುನಾವಣಾ ಆಯೋಗ ಈ ಹಿಂದೆಯೇ ಹೇಳಿತ್ತು.
2026ರಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಅಂದರೆ, ಈ ವರ್ಷಾಂತ್ಯದಿಂದಲೇ ಈ ರಾಜ್ಯಗಳಲ್ಲಿ 'ಎಸ್‌ಐಆರ್' ಪ್ರಕ್ರಿಯೆಗಳು ಆರಂಭಗೊಳ್ಳುವ ಸಾಧ್ಯತೆ ಇದೆ.
'ಎಸ್‌ಐಆರ್' ಉದ್ದೇಶ
ಜನ್ಮಸ್ಥಳ ಪರಿಶೀಲನೆಯ ಮೂಲಕ ವಿದೇಶಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದು
ಬಾಂಗ್ಲಾದೇಶ, ಮ್ಯಾನ್ಮಾರ್ ಸೇರಿ ದೇಶದಲ್ಲಿ ನುಸುಳಿರುವ ವಿದೇಶಿ ಅಕ್ರಮ ವಲಸಿಗರನ್ನು ಗುರುತಿಸುವುದು
ಮತದಾರರ ಪಟ್ಟಿಯ ಸಮಗ್ರತೆ ರಕ್ಷಿಸಲು, ಸಾಂವಿಧಾನಿಕ ಆದೇಶ ನಿರ್ವಹಿಸಲು ಮುಂದಾದ ಆಯೋಗ
ಮತಗಟ್ಟೆ ಅಧಿಕಾರಿಗಳು ಬೂತ್ ಮಟ್ಟದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ, ಮತದಾರರ ವಿವರವನ್ನು ಸಂಗ್ರಹಿಸಿ, ಖಚಿತಪಡಿಸಿಕೊಳ್ಳುವುದು.




