ನವದೆಹಲಿ: ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದ ಬಗ್ಗೆ ತನಿಖೆ ನಡೆಸಲು ಎನ್‌ಡಿಎ ಮೈತ್ರಿಕೂಟದಿಂದ 8 ಸಂಸದರ ನಿಯೋಗವನ್ನು ರಚಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ.
ಬಿಜೆಪಿ ಸಾಮಾನ್ಯವಾಗಿ ದುರಂತಗಳು ನಡೆದ ಸಂದರ್ಭದಲ್ಲಿ ತನಿಖೆಗಾಗಿ ತನ್ನದೇ ಪಕ್ಷದ ನಾಯಕರನ್ನು ಕಳುಹಿಸುತ್ತಿತ್ತು.
ಆದರೆ, ಈ ಬಾರಿ ತನ್ನ ಮಿತ್ರಪಕ್ಷಗಳಾದ ಶಿವಸೇನಾ, ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸದರನ್ನು ಒಳಗೊಂಡ ಎಂಟು ಸದಸ್ಯರ ಸಮಿತಿಯನ್ನು ರಚಿಸಿದೆ.
ಈ ನಿಯೋಗದಲ್ಲಿ ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ, ಟಿಡಿಪಿ ಸಂಸದ ಮಹೇಶ್ ಕುಮಾರ್ ಸೇರಿದಂತೆ ಬಿಜೆಪಿ ಸಂಸದರಾದ ಹೇಮಾ ಮಾಲಿನಿ, ಅಪರಾಜಿತಾ ಸಾರಂಗಿ, ರೇಖಾ ಶರ್ಮಾ, ಬ್ರಿಜ್‌ಲಾಲ್, ಅನುರಾಗ್ ಠಾಕೂರ್, ತೇಜಸ್ವಿ ಸೂರ್ಯ ಇದ್ದಾರೆ.
ಸೆಪ್ಟೆಂಬರ್ 27ರಂದು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ಕರೂರಿನಲ್ಲಿ ನಡೆಸಿದ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ ಈವರೆಗೆ 41 ಮಂದಿ ಮೃತಪಟ್ಟಿದ್ದಾರೆ.




