HEALTH TIPS

ADR report: ದೇಶದಲ್ಲಿ ಶೇ. 47 ರಷ್ಟು ಸಚಿವರ ಮೇಲೆ ಕ್ರಿಮಿನಲ್ ಆರೋಪ, ಬಿಲಿಯನೇರ್ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ, ಡಿಕೆಶಿ ಎಷ್ಟನೇ ಶ್ರೀಮಂತ?

ನವದೆಹಲಿ: ದೇಶದಲ್ಲಿ ಸುಮಾರು ಶೇ. 47 ರಷ್ಟು ಸಚಿವರು ಕೊಲೆ, ಅಪಹರಣ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತಿತರ ಗಂಭೀರವಾದ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಹೇಳಿದೆ.

ಗಂಭೀರ ಕ್ರಿಮಿನಲ್ ಆರೋಪದಲ್ಲಿ 30 ದಿನ ಶಿಕ್ಷೆಗೊಳಗಾದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ಪದಚ್ಯುತಿಗೊಳಿಸುವ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದ ಬೆನ್ನಲ್ಲೇ ಈ ವರದಿ ಬಿಡುಗಡೆಯಾಗಿದೆ. ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ಎಡಿಆರ್ ಗುರುವಾರ ವರದಿ ಬಿಡುಗಡೆ ಮಾಡಿದೆ.

302 ಸಚಿವರ ವಿರುದ್ಧ ಕ್ರಿಮಿನಲ್ ಆರೋಪ: 27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರ ಅಫಿಡವಿಟ್‌ಗಳನ್ನು ವಿಶ್ಲೇಷಿಸಲಾಗಿದೆ. ಇವರಲ್ಲಿ 302 ಸಚಿವರು ಅಂದರೆ ಶೇ.47 ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಆರೋಪವಿದೆ. ಇವರಲ್ಲಿ 174 ಸಚಿವರು ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪ ಎದುರಿಸುತ್ತಿರುವುದಾಗಿ ವರದಿ ಹೇಳಿದೆ.

336 ಬಿಜೆಪಿ ಸಚಿವರ ಪೈಕಿ 136 ಮಂದಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ 88 ಮಂದಿ ವಿರುದ್ಧ ಗಂಭೀರ ಆರೋಪಗಳಿವೆ. ನಾಲ್ಕು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ 45 ಸಚಿವರ ಮೇಲೆ ಕ್ರಿಮಿನಲ್ ಆರೋಪ ವಿದೆ. ಈ ಪೈಕಿ 18 ಮಂದಿ ವಿರುದ್ಧ ಗಂಭೀರ ಆರೋಪಗಳಿವೆ.

ಕ್ರಿಮಿನಲ್ ಆರೋಪ ಇಲ್ಲದ ಸಚಿವರ ರಾಜ್ಯಗಳು: ಆಂಧ್ರ ಪ್ರದೇಶ, ತಮಿಳುನಾಡು, ಬಿಹಾರ, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ತೆಲಂಗಾಣ, ಹಿಮಾಚಲ ಪ್ರದೇಶ, ದೆಹಲಿ ಮತ್ತು ಪುದುಚೇರಿ ಸೇರಿದಂತೆ 11 ವಿಧಾನಸಭೆಯ ಶೇ. 60 ರಷ್ಟು ಸಚಿವರ ಮೇಲೆ ಕ್ರಿಮಿನಲ್ ಆರೋಪವಿದೆ. ಇದಕ್ಕೆ ವಿರುದ್ಧವಾಗಿ ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ನಾಗಲ್ಯಾಂಡ್, ಉತ್ತರಾಖಂಡ್ ರಾಜ್ಯಗಳಲ್ಲಿ ಯಾವುದೇ ಸಚಿವರು ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ.

ಸಚಿವರ ಆಸ್ತಿಯೂ ಬಹಿರಂಗ: 30 ವಿಧಾನಸಭಾ ಕ್ಷೇತ್ರಗಳ ಪೈಕಿ 11ರಲ್ಲಿ ಕೋಟ್ಯಾಧೀಶರಿದ್ದಾರೆ. ಕರ್ನಾಟಕದಲ್ಲಿ 8 ಮಂದಿ ಬಿಲಿಯನೇರ್ ಸಚಿವರಿದ್ದಾರೆ. ತದನಂತರ ಆಂಧ್ರಪ್ರದೇಶದಲ್ಲಿ ಆರು, ಮಹಾರಾಷ್ಟ್ರದಲ್ಲಿ ನಾಲ್ಕು ಇಂತಹ ಸಚಿವರಿದ್ದಾರೆ.

ಲೋಕಸಭೆಯಲ್ಲಿ ಆಂಧ್ರಪ್ರದೇಶದ ಗುಂಟೂರಿನಿಂದ ಪ್ರತಿನಿಧಿಸುವ ಟಿಡಿಪಿಯ ಡಾ. ಚಂದ್ರಶೇಖರ್ ಪೆಮ್ಮಸಾನಿ ದೇಶದ ಅತ್ಯಂತ ಶ್ರೀಮಂತ ಸಚಿವರಾಗಿದ್ದಾರೆ. ಇವರು ಒಟ್ಟು ರೂ. 5,705 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ನಾಯಕ, ಡಿ ಕೆ ಶಿವಕುಮಾರ್ ಅವರು 1,413 ಕೋಟಿ ಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ರೂ. 931 ಕೋಟಿಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ.

ಟಾಪ್ 10 ರಲ್ಲಿರುವ ಇತರ ಶ್ರೀಮಂತ ಸಚಿವರೆಂದರೆ ಆಂಧ್ರಪ್ರದೇಶದ ನಾರಾಯಣ ಪೊಂಗೂರು ಮತ್ತು ನಾರಾ ಲೋಕೇಶ್, ತೆಲಂಗಾಣದ ಗದ್ದಂ ವಿವೇಕಾನಂದ ಮತ್ತು ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಕರ್ನಾಟಕದ ಸುರೇಶ್ ಬಿ ಎಸ್, ಮಹಾರಾಷ್ಟ್ರದ ಮಂಗಲ್ ಪ್ರಭಾತ್ ಲೋಧಾ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಇದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries