ಲಕ್ನೋ : ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಸುಳ್ಳು ವರದಿಗಳನ್ನು ಪ್ರಕಟಿಸಿದ ಆರೋಪದಲ್ಲಿ ಉತ್ತರ ಪ್ರದೇಶದ ಲಕ್ನೋ ಜಿಲ್ಲಾ ನ್ಯಾಯಾಲಯ ANI ಸುದ್ದಿ ಸಂಸ್ಥೆಯ ಸಂಪಾದಕಿ ಸ್ಮಿತಾ ಪ್ರಕಾಶ್ ವಿರುದ್ಧ ದೂರು ದಾಖಲಿಸುವಂತೆ ನಿರ್ದೇಶಿಸಿದೆ ಎಂದು ವರದಿಯಾಗಿದೆ.
ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರು ಪ್ರಕಾಶ್ ವಿರುದ್ಧ ದೂರು ನೀಡಿದ್ದಾರೆ.
ಯಾವುದೇ ಅಧಿಕೃತ ದೃಢೀಕರಣವಿಲ್ಲದೆ ANI ಸಾಂವಿಧಾನಿಕ ಸಂಸ್ಥೆಯ ಹೆಸರಿನಲ್ಲಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುತ್ತಿದೆ ಎಂದು ಠಾಕೂರ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಚುನಾವಣಾ ಆಯೋಗ ತನ್ನ ವೆಬ್‌ಸೈಟ್ ಅಥವಾ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟಿಸಿರದ ವಿಷಯಗಳನ್ನು ಚುನಾವಣಾ ಆಯೋಗ ಹೇಳಿದೆ ಎಂದು ಸ್ಮಿತಾ ಪ್ರಕಾಶ್ ನೇತೃತ್ವದ ಎಎನ್‌ಐ ವರದಿ ಮಾಡಿದೆ. ಈ ಮೂಲಕ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅಮಿತಾಬ್ ಠಾಕೂರ್ ಆರೋಪಿಸಿದ್ದಾರೆ.
ಸೆಪ್ಟೆಂಬರ್ 11 ರಂದು ಲಕ್ನೋದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶದಲ್ಲಿ ಈ ದೂರು ಪ್ರಕರಣವಾಗಿ ನೋಂದಾಯಿಸಲು ಅರ್ಹವಾಗಿದೆ ಎಂದು ಹೇಳಿದೆ.
ದೂರುದಾರರು ಸೆಪ್ಟೆಂಬರ್ 26ರಂದು ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿದೆ.




