ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಯವರ ಎದೆಗೆ ಗುಂಡು ಹೊಡೆಯುತ್ತೇವೆಂದು ಹೇಳುವ ಮೂಲಕ ಕೊಲೆ ಬೆದರಿಕೆ ಹಾಕಿರುವ ಕೇರಳ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್, ರಾಹುಲ್ ಗಾಂಧಿಯ ಎದೆಗೆ ಗುಂಡು ಹಾರಿಸಲಾಗುವುದು ಎಂದು ಕೇರಳ ಬಿಜೆಪಿ ವಕ್ತಾರ ಪಿಂಟು ಮಹಾದೇವ್ ಅವರು ಹೇಳಿದ್ದು, ಈ ಕುರಿತು ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಇದು ಯಾವುದೇ ನೇರ ಹೇಳಿಕೆ ಅಥವಾ ಅತಿಶಯೋಕ್ತಿಯಲ್ಲ. ನ್ಯಾಯಕ್ಕಾಗಿ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯನ ಜೊತೆ ನಿಲ್ಲುವ ನಾಯಕನಿಗೆ ಹಾಕಲಾಗುತ್ತಿರುವ ಕೊಲೆ ಬೆದರಿಕೆಯಾಗಿದೆ ಎಂದು ಹೇಳಿದೆ.
ಇದು ಕಾನೂನಿನ ನಿಯಮದ ಮೇಲೆ, ಪ್ರತಿಯೊಬ್ಬ ನಾಗರಿಕನಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವ ಸಂವಿಧಾನದ ಮೇಲಿನ ನೇರ ದಾಳಿಯಾಗಿದೆ. ರಾಹುಲ್ ಗಾಂಧಿಯವರಿಗೆ ಹಲವಾರು ಸಂದರ್ಭಗಳಲ್ಲಿ ಜೀವ ಬೆದರಿಕೆ ಹಾಕಲಾಗಿದ್ದು, ಬಿಜೆಪಿಯ ಉದ್ದೇಶದ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡುವಂತೆ ಮಾಡಿದೆ.
ಇದು ರಾಹುಲ್ ಗಾಂಧಿ ವಿರುದ್ಧ ರೂಪಿಸಲಾಗುತ್ತಿರುವ ಪಿತೂರಿಯೇ? ಬಿಜೆಪಿ ಕ್ರಿಮಿನಲ್ ಬೆದರಿಕೆ, ಹಿಂಸೆ ಮತ್ತು ಕೊಲೆ ಬೆದರಿಕೆಗಳನ್ನು ಬೆಂಬಲಿಸುತ್ತದೆಯೇ? ದುರಾಡಳಿತದ ವಿರುದ್ಧ ಧ್ವನಿ ಎತ್ತುವ ವಿರೋಧ ಪಕ್ಷದ ನಾಯಕರ ವಿರುದ್ಧ ಹಿಂಸಾಚಾರವನ್ನು ಸಾಮಾನ್ಯಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆಯೇ? ಇದಕ್ಕೆ ಬಿಜೆಪಿ ಉತ್ತರಿಸಬೇಕು.




