HEALTH TIPS

ಕುವೈತ್‌ | ಗಲ್ಫ್‌ ಬ್ಯಾಂಕ್ ಸಾಲ ಮರುಪಾವತಿಸದ ಕೇರಳದ ನರ್ಸ್‌ಗಳು: ಪ್ರಕರಣ ದಾಖಲು

 ಕೊಚ್ಚಿ: ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕುವೈತ್‌ನ ಅಲ್‌ ಅಹ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ಮರುಪಾವತಿ ಮಾಡದ ಕೇರಳದ 13 ಶುಶ್ರೂಷಕಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಪ್ರಕರಣ ದಾಖಲಿಸುವ ಮೊದಲು ಗಲ್ಫ್‌ ಬ್ಯಾಂಕ್‌ನ ಅಧಿಕಾರಿಗಳು ಕೇರಳ ಪೊಲೀಸರನ್ನು ಸಂಪರ್ಕಿಸಿದ್ದರು. 2024ರಿಂದ ಇಲ್ಲಿಯವರೆಗೆ ಇಂಥ ಒಟ್ಟು 10 ಪ್ರಕರಣಗಳು ದಾಖಲಾಗಿವೆ.


'2019ರಿಂದ 2021ರ ಅವಧಿಯಲ್ಲಿ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕುವೈತ್‌ನಲ್ಲಿ ಕೆಲಸ ಮಾಡುವಾಗ ಕೇರಳದ ಈ 13 ಶುಶ್ರೂಷಕಿಯರು ಸಾಲ ಪಡೆದಿದ್ದರು. ಸುಸ್ತಿದಾರರ ಬಾಕಿ ಮೊತ್ತ ₹10.33 ಕೋಟಿಯಾಗಿದ್ದು, ನೌಕರಿ ಒಪ್ಪಂದ ಕೊನೆಗೊಂಡ ನಂತರ ಇವರೆಲ್ಲರೂ ಕೇರಳಕ್ಕೆ ಮರಳಿದ್ದರು. ನಂತರ ಉತ್ತಮ ಅವಕಾಶಗಳನ್ನು ಅರಸಿ ಯುರೋಪ್ ಮತ್ತು ಪಶ್ಚಿಮದ ದೇಶಗಳಿಗೆ ವಲಸೆ ಹೋಗಿದ್ದಾರೆ. ಈವರೆಗೂ ಪಡೆದ ಸಾಲವನ್ನು ತೀರಿಸಿಲ್ಲ' ಎಂದು ಅಲ್ ಅಹ್ಲಿ ಬ್ಯಾಂಕ್ ಪ್ರತಿನಿಧಿಸುವ ಜೇಮ್ಸ್ ಮತ್ತು ಥಾಮಸ್ ಅಸೋಸಿಯೇಟ್ಸ್‌ನ ಥಾಮಸ್ ಜೆ. ಅನಕ್ಕಲ್ಲುಂಕುಲ್ ಆರೋಪಿಸಿದ್ದಾರೆ.

ಈ ಕುರಿತು ಕೇರಳದ ಪೊಲೀಸ್ ಮುಖ್ಯಸ್ಥರಿಗೆ ಬ್ಯಾಂಕ್ ದೂರು ನೀಡಿತ್ತು. ಇದರನ್ವಯ ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೊಟ್ಟಾಯಂನಲ್ಲಿ ಕುರವಿಲಂಗಾಡ್, ಅಯರ್ಕುನ್ನಮ್, ವೆಲ್ಲೂರು, ಕಾಡುತುರುತಿ, ವೈಕೋಮ್ ಮತ್ತು ಥಲಯೋಲಪರಂಬು ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಪುಥೆನ್‌ಕ್ರೂಜ್, ಪೋಥಾನಿಕಾಡ್, ವರಪ್ಪುಳ ಮತ್ತು ಅಂಗಮಾಲಿ ಪೊಲೀಸ್ ಠಾಣೆಗಳು ಸೇರಿದಂತೆ ಎರ್ನಾಕುಲಂನಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಪ್ರತಿ ಶುಶ್ರೂಷಕಿಯರಿಂದ ಕನಿಷ್ಠ ₹61 ಲಕ್ಷದಿಂದ ಗರಿಷ್ಠ ₹91 ಲಕ್ಷದವರೆಗೂ ಬ್ಯಾಂಕ್‌ಗೆ ಬಾಕಿ ಬರಬೇಕಿದೆ' ಎಂದು ಥಾಮಸ್ ಹೇಳಿದ್ದಾರೆ.

'ಈ ಶುಶ್ರೂಷಕಿಯರು ಆರಂಭದಲ್ಲಿ ಸಣ್ಣ ಮೊತ್ತದ ಸಾಲ ಪಡೆದು ಅದನ್ನು ಸಕಾಲದೊಳಗೆ ಮರು ಪಾವತಿ ಮಾಡುತ್ತಾರೆ. ನಂತರ ಇವರ ಸಾಲದ ಇತಿಹಾಸವನ್ನು ಗಮನಿಸಿ ಬ್ಯಾಂಕ್ ದೊಡ್ಡ ಸಾಲ ನೀಡಲು ಒಪ್ಪುತ್ತದೆ. ಆರಂಭದಲ್ಲಿ ಸಾಲದ ಕೆಲವು ಕಂತುಗಳನ್ನು ಪಾವತಿಸುವ ಇವರು, ನಂತರ ಯಾವುದೇ ಮಾಹಿತಿ ನೀಡದೆ ದೇಶ ತೊರೆಯುವುದು ಇವರ ತಂತ್ರಗಾರಿಕೆ. ಹೀಗೆ ಸಾಲ ಬಾಕಿ ಉಳಿಸಿಕೊಂಡ ಶುಶ್ರೂಷಕಿಯರು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಆದರೆ ಸಾಲ ಮರುಪಾವತಿಸುತ್ತಿಲ್ಲ' ಎಂದು ಹೇಳಿದ್ದಾರೆ.

ಗಲ್ಫ್‌ ಬ್ಯಾಂಕ್‌ ಪ್ರಕರಣದಲ್ಲಿ ಕಳೆದ ವರ್ಷ ಒಬ್ಬ ಸುಸ್ತಿದಾರರ ಸಾಲ ಇತ್ಯರ್ಥಪಡಿಸಲಾಗಿದೆ. ಇತರರು ನಿರೀಕ್ಷಣಾ ಜಾಮೀನಿಗಾಗಿ ಕೇರಳದ ನ್ಯಾಯಾಲಯದ ಮೊರೆ ಹೋಗಿದ್ದರು. ಅದನ್ನು ವಜಾಗೊಂಡಿದೆ. ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗ ನಡೆಸುತ್ತಿದೆ. ಸುಸ್ತಿದಾರರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಥಾಮಸ್ ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries