ನವದೆಹಲಿ: ಇಡೀ ಜಗತ್ತೇ ಇಂಟರ್ನೆಟ್, ಸ್ಯಾಟಲೈಟ್ ಸಂಪರ್ಕದಲ್ಲಿ ನಿಂತಿದೆ. ಒಂದು ಕ್ಷಣ ಇಂಟರ್ನೆಟ್ ವ್ಯತ್ಯಯಗೊಂಡರೆ ಎಲ್ಲವೂ ಅಲ್ಲೋಲ ಕಲ್ಲೋಲವಾಗಲಿದೆ. ನಷ್ಟ ಮಾತ್ರವಲ್ಲ, ದೇಶದ ಭದ್ರತೆಗೂ ಸವಾಲಾಗಲಿದೆ. ಇದನ್ನೇ ಟಾರ್ಗೆಟ್ ಮಾಡಿರುವ ಹೌಥಿಸ್ ಉಗ್ರರು ಕೆಂಪು ಸಮುದ್ರದ ಆಳದಲ್ಲಿ ಹಾಕಿರುವ ಕೇಬಲ್ ನಾಶಪಡಿಸುವ ಪ್ರಯತ್ನಗಳು ನಡೆದಿದೆ ಎಂದು ವರದಿಯಾಗಿದೆ.
ಇದರ ಪರಿಣಾಮ ಕೆಂಪು ಸಮುದ್ರದಲ್ಲಿ ಹಾಕಲಾಗಿರುವ ಕೇಬಲ್ ಕಟ್ ಆಗಿದೆ. ಇದರಿಂದ ಭಾರತ, ಏಷ್ಯಾ, ಮಧ್ಯಪ್ರಾಚ್ಯ ದೇಶಗಳಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯವಾಗಿದೆ.
ಮೈಕ್ರೋಸಾಫ್ಟ್ ಸೇರಿ ಹಲವರಿಂದ ಇಂಟರ್ನೆಟ್ ಸಮಸ್ಯೆ ದೂರು
ಭಾರತದ ಹಲವೆಡೆ ಇಂಟರ್ನೆಟ್ ಸೇವೆ ನಿಧಾನಗೊಂಡಿದೆ. ಹಲವರು ಇಂಟರ್ನೆಟ್ ಇಲ್ಲದೆ ಪರದಾಡಿದ್ದಾರೆ. ಮಧ್ಯಪ್ರಾಚ್ಯದ ಮೈಕ್ರೋಸಾಫ್ಟ್ ಕಚೇರಿಗಳು ಇಂಟರ್ನೆಟ್ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಿದೆ. ರೆಡ್ ಸೀನಲ್ಲಿರುವ ಕೇಬಲ್ ಸಮಸ್ಯೆಯಿಂದ ಇಂಟರ್ನೆಟ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸಮಸ್ಯೆ ಹೆಚ್ಚಾಗುತ್ತಿದೆ ಎಂದಿದೆ. ಕೇಬಲ್ ಸಮಸ್ಯೆಗಳು ತಲೆದೋರಿದ್ದು, ಹಲವು ದೇಶಗಳಲ್ಲಿ ಇಂಟರ್ನೆಟ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ನೆಟ್‌ಬ್ಲಾಕ್ಸ್ ಹೇಳಿದೆ.
ಎರಡು ಕೇಬಲ್ ಕಟ್
ಕೆಂಪು ಸಮದ್ರದಲ್ಲಿ ಹಾಕಿರುವ ಕೇಬಲ್ ಪೈಕಿ SMW4 ಹಾಗೂ IMEWE ಕೇಬಲ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಇಂಟರ್ನೆಟ್ ಆಯಕ್ಸೆಸ್ ಮಾನಿಟರಿಂಗ್ ವೆಬ್‌ಸೈಟ್ ಪ್ರಕಾರ ಜೆದ್ದಾ ಹಾಗೂ ಸೌದಿ ಅರೇಬಿಯಾ ಪ್ರದೇಶಗಳಲ್ಲಿ ರೆಡ್ ಸೀ ಕೇಬಲ್ ಡ್ಯಾಮೇಜ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಿದೆ. ಭಾರತದ ಕೆಲವೆಡೆ ಇಂಟರ್ನೆಟ್ ಸಮಸ್ಯೆ ಕಾಣಿಸಿಕೊಂಡಿದ್ದರೆ, ಪಾಕಿಸ್ತಾನದ ಬಹುತೇಕ ಕಡೆ ಇಂಟರ್ನೆಟ್ ಸಮಸ್ಯೆ ಕಾಣಿಸಿಕೊಂಡಿದೆ.
ಟಾಟಾ ಕಮ್ಯೂನಿಕೇಶನ್‌ನಿಂದ 4 ಕೇಬಲ್ ನಿರ್ವಹಣೆ
ಆಗ್ನೇಯ ಏಷ್ಯಾದ, ಮಧ್ಯ ಪ್ರಾಚ್ಯ ಹಾಗೂ ಪಶ್ಚಿಮ ಯೂರೋಪ್ ಸೇರಿದಂತೆ ನಾಲ್ಕು ಇಂಟರ್ನೆಟ್ ಕೇಬಲ್‌ಗಳನ್ನು ಟಾಟಾ ಕಮ್ಯೂನಿಕೇಶನ್ ನಿರ್ವಹಣೆ ಮಾಡುತ್ತಿದೆ. ಇನ್ನು ಭಾರತ-ಮಧ್ಯಪ್ರಾಚ್ಯ ಹಾಗೂ ಪಶ್ಚಿಮ ಯೂರೋಪ್ ಪ್ರಾಂತ್ಯದ ಕೇಬಲ್‌ಗಳನ್ನು ಅಲ್ಕೆಟಲ್ ಲ್ಯೂಸೆಂಟ್ ನಿರ್ವಹಣೆ ಮಾಡುತ್ತಿದೆ.
ಯುನೈಟೆಡ್ ಅರಬ್ ಎಮಿರೈಟ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಇಂಟರ್ನೆಟ್ ಸಂಪೂರ್ಣ ನಿಧಾನವಾಗಿದೆ. ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಲವು ಸೇವೆಗಳು ಇಂಟರ್ನೆಟ್ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಹೌಥಿಸ್ ಉಗ್ರರೇ ಕೇಬಲ್ ಸಮಸ್ಯೆಯ ಹಿಂದಿದ್ದರೆ, ಅದು ದೇಶಗಳ ಭದ್ರತೆ ಮೇಲೂ ಪರಿಣಾಮ ಬೀರಲಿದೆ ಅನ್ನೋ ಆತಂಕ ಎದುರಾಗಿದೆ.
ಇಸ್ರೇಲ್ ನಡೆಸುತ್ತಿರುವ ಯುದ್ಧ ಅಂತ್ಯಗೊಳಿಸಲು ಹೌಥಿಸ್ ಉಗ್ರರು ಈ ತಂತ್ರ ಹೆಣೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಮಾಸ್ ಉಗ್ರರ ಟಾರ್ಗೆಟ್ ಮಾಡಿ ಇಸ್ರೇಲ್ ಗಾಜಾ ಪಟ್ಟಿ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಇದನ್ನು ಅಂತ್ಯಗೊಳಿಸಲು ಯೆಮಿನಿ ಉಗ್ರರ ಗುಂಪ ಈ ತಂತ್ರ ಹೆಣೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ದಾಳಿ ಕುರಿತು ಹೌಥಿಸ್ ಉಗ್ರರು ಪ್ರತಿಕ್ರಿಯಿಸಿದ್ದು, ಕೆಂಪು ಸಮುದ್ರದ ಆಳದಲ್ಲಿರುವ ಕೇಬಲ್ ಮೇಲೆ ದಾಳಿ ನಡೆಸಿಲ್ಲ ಎಂದಿದೆ. ಆದರೆ ಅನುಮಾನಗಳು ಹೆಚ್ಚಾಗ ತೊಡಗಿದೆ.




