ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆ ನಳಂದಾದಲ್ಲಿ ರವಿವಾರ ರಾತ್ರಿ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದು ಸಂಭವಿಸಿದ ದುರಂತದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.ಹರ್ನಾಟ್ ಬಜಾರ್ ಸಮೀಪದ ಗೊವಾನಾ ರಸ್ತೆಯಲ್ಲಿ ಸೇತುವೆ ನಿರ್ಮಾಣದಲ್ಲಿ ಕಾರ್ಮಿಕರು ತೊಡಗಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಹಲವು ಮಂದಿ ಕಾರ್ಮಿಕರು ಅವಶೇಷದ ಅಡಿಯಲ್ಲಿ ಸಿಲುಕಿ ಗಾಯಗೊಂಡಿದ್ದಾರೆ.
ದಿಢೀರನೇ ಸಂಭವಿಸಿದ ಕುಸಿತ ಅಲ್ಲಿ ಹಾದುಹೋಗುತ್ತಿದ್ದವರಲ್ಲಿ ಭೀತಿಗೆ ಕಾರಣವಾಯಿತು ಹಾಗೂ ರಕ್ಷಣೆಗಾಗಿ ಓಡಿಹೋದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಪರಿಹಾರ ಕಾರ್ಯಾಚರಣೆಗೆ ಕೋರಿದರು.
ಹರ್ನಾಟ್ ರೈಲ್ವೆ ಕ್ರಾಸಿಂಗ್ ಬಳಿಗೆ ಪೊಲೀಸ್ ತಂಡ ಧಾವಿಸಿದೆ.ಆರು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ ಎಂದು ಠಾಣಾಧಿಕಾರಿ ಅಮರೇಂದ್ರ ಕುಮಾರ್ ಹೇಳಿದ್ದಾರೆ.
ಕಳಪೆ ಕಾಮಗಾರಿ ಈ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಅಧಿಕೃತ ತನಿಖೆ ಬಳಿಕ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತಕ್ಕೆ ಕಾರಣವನ್ನು ಪತ್ತೆ ಮಾಡುವುದಾಗಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಬಿಹಾರದಲ್ಲಿ 27 ಸೇತುವೆಗಳು ಕುಸಿದಿರುವುದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ಮೋತಿಹರಿಯಲ್ಲ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಹೇಳಿದ್ದರು.

