ಅಹಮದಾಬಾದ್ : ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ಭಾನುವಾರ ಎರಡು ಬಾರಿ ಭೂಕಂಪ ಸಂಭವಿಸಿದೆ ಎಂದು ಭೂಕಂಪವಿಜ್ಞಾನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ತಿಳಿಸಿದೆ.
ಜಿಲ್ಲೆಯ ಧೋಲಾವಿರದಿಂದ 24 ಕಿ.ಮೀ ದೂರದಲ್ಲಿ ಮುಂಜಾನೆ 6.42ಕ್ಕೆ ಭೂಕಂಪ ಸಂಭವಿಸಿದೆ. ಇದು ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ಹೊಂದಿತ್ತು.
ನಂತರ ಮಧ್ಯಾಹ್ನ 12.41ಕ್ಕೆ ಮತ್ತೊಮ್ಮೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿದೆ. ಬಛೌ ಪ್ರದೇಶದಿಂದ 12 ಕಿ.ಮೀ ದೂರದಲ್ಲಿ ಅದರ ಕೇಂದ್ರ ಬಿಂದುವಿದೆ ಎಂದು ಐಎಸ್‌ಆರ್ ತನ್ನ ವರದಿಯಲ್ಲಿ ತಿಳಿಸಿದೆ.
ಎರಡೂ ಘಟನೆಗಳಲ್ಲಿ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.
ಕಛ್ ಜಿಲ್ಲೆಯು 'ಅತ್ಯಂತ ಅಪಾಯಕಾರಿ' ಭೂಕಂಪ ವಲಯದಲ್ಲಿದ್ದು, ಆಗಾಗ ಕಡಿಮೆ ತೀವ್ರತೆಯ ಭೂಕಂಪಗಳು ಸಂಭವಿಸುತ್ತಿರುತ್ತವೆ.
2001ರಲ್ಲಿ ಕಛ್‌ನಲ್ಲಿ ಸಂಭವಿಸಿದ್ದ ಭಾರಿ ಭೂಕಂಪದಲ್ಲಿ 13,800 ಮಂದಿ ಸಾವಿಗೀಡಾಗಿದ್ದರು ಹಾಗೂ 1.67 ಲಕ್ಷ ಜನರು ಗಾಯಗೊಂಡಿದ್ದರು.
ಶಿಲ್ಲಾಂಗ್ : ಬಾಂಗ್ಲಾದೇಶದಲ್ಲಿ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 4 ತೀವ್ರತೆ ದಾಖಲಾಗಿದೆ. ಈ ವೇಳೆ ಮೇಘಾಲಯದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು. ಘಟನೆಯಲ್ಲಿ ರಾಜ್ಯದಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಮುಂಜಾನೆ 11.49ರ ಸುಮಾರಿಗೆ ಮೇಘಾಲಯದ ಗಡಿ ಬಳಿ ಬಾಂಗ್ಲಾದೇಶದಲ್ಲಿ ಭೂಕಂಪ ಸಂಭವಿಸಿದೆ.




