ಕಾಸರಗೋಡು: ಮುಂಬರುವ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯನ್ನು ಸಂಪೂರ್ಣವಾಗಿ ಹಸಿರು ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಆಯೋಗ ವತಿಯಿಂದ ಆಯೋಜಿಸಲಾಗಿದ್ದ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ಚುನಾವಣಾ ಆಯುಕ್ತ ಎ. ಶಹಜಹಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಕ್ರಿಯಾ ಯೋಜನೆಯನ್ನು ರಚಿಸಸಲಾಯಿತು. ಸಾರ್ವಜನಿಕರಿಗೆ ಈ ಬಗ್ಗೆ ಯಾವುದೇ ಸಲಹೆ ಸೂಚನೆಗಳಿದ್ದರೆ, ಅಕ್ಟೋಬರ್ 10 ರವರೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಸ್ಥಳೀಯಾಡಳಿತ ಇಲಾಖೆ, ಶುಚಿತ್ವ ಮಿಷನ್, ಕ್ಲೀನ್ ಕೇರಳ ಕಂಪನಿ, ಕುಟುಂಬಶ್ರೀ ಮತ್ತು ಹಸಿರು ಕ್ರಿಯಾ ಸೇನೆಯ ಸಹಭಾಗಿತ್ವದಲ್ಲಿ, ಚುನಾವಣೆ ಘೋಷಣೆಯಿಂದ ತೊಡಗಿ ಫಲಿತಾಂಶ ಪ್ರಕಟಗೊಳ್ಳುವಲ್ಲಿ ವರೆಗಿನ ಎಲ್ಲಾ ಚಟುವಟಿಕೆಗಳಲ್ಲಿ ಹಸಿರು ನೀತಿ ಸಂಹಿತೆಯನ್ನು ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲಾಗುವುದು. ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ಚುನಾವಣಾ ಆಯೋಗದ ನೇತೃತ್ವದಲ್ಲಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯೋಗ ಕಾರ್ಯಯೋಜನೆ ತಯಾರಿಸಲಿದೆ. ಚುನಾವಣಾಧಿಕಾರಿಗಳ ತರಬೇತಿ ಕೇಂದ್ರಗಳು, ಕಚೇರಿಗಳು, ಚುನಾವಣಾ ವಿತರಣಾ ಕೇಂದ್ರಗಳು, ಮತಗಟ್ಟೆಗಳು, ಎಲ್ಲಾ ಮತಎಣಿಕೆ ಕೇಂದ್ರಗಳಲ್ಲಿ ಹಸಿರು ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಸ್ಥಳಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಕ್ಷಣ ತೆಗೆದುಹಾಕಲು ಹಸಿರುಕ್ರಿಯಾ ಸೇನೆ ಮತ್ತು ಕ್ಲೀನ್ ಕೇರಳ ಕಂಪನಿಯ ಸೇವೆಗಳನ್ನು ಬಳಸಿಕೊಳ್ಳಲಾಗುವುದು. ಪರಿಸರ ಸ್ನೇಹಿ ರೀತಿಯಲ್ಲಿ ಆಹಾರ ವಿತರಣೆ ಮಾಡುವ ಕಾರ್ಯವನ್ನು ಕುಟುಂಬಶ್ರೀಗೆ ವಹಿಸಿಕೊಡಲಾಗುವುದು. ಚುನಾವಣೆಯಲ್ಲಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು, ಚುನಾವಣಾ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಹಸಿರು ಸಂಹಿತೆ ಪಾಲಿಸಲು ಸಮಾನ ಜವಾಬ್ದಾರಿ ಇರಲಿದೆ. ಪ್ರಚಾರಕ್ಕಾಗಿ ಬಳಸುವ ಮುದ್ರಣ ಸಾಮಗ್ರಿಗಳಲ್ಲಿ ಯಾವುದೇ ನಿಷೇಧಿತ ವಸ್ತುಗಳನ್ನು ಬಳಸಲಾಗಿಲ್ಲ ಎಂದು ರಾಜಕೀಯ ಪಕ್ಷಗಳು ಖಚಿತಪಡಿಸಬೇಕು. ನಿಷೇಧಿತ ವಸ್ತುಗಳನ್ನು ಬಳಸುವುದು ಕಂಡುಬಂದರೆ, ದಂಡ ವಿಧಿಸಲಾಗುತ್ತದೆ.
ಚುನಾವಣಾ ಪ್ರಚಾರದ ಸಮಯದಲ್ಲಿ ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ಅಕ್ಟೋಬರ್ 10 ರ ಮೊದಲು ಛಿಡಿu.seಛಿ@ಞeಡಿಚಿಟಚಿ.gov.iಟಿ ಗೆ ಅಥವಾ ರಾಜ್ಯ ಚುನಾವಣಾ ಆಯೋಗ, ಜನಹಿತಂ, ವಿಕಾಸ್ ಭವನ ಪಿಒ, ತಿರುವನಂತಪುರಂ ಗೆ ಕಳುಹಿಸಬಹುದು.
ಸ್ಥಳೀಯಾಡಳಿತ ಇಲಾಖೆ ವಿಶೇಷ ಕಾರ್ಯದರ್ಶಿ ಟಿ.ವಿ. ಅನುಪಮಾ, ಪ್ರಧಾನ ನಿರ್ದೇಶಕ ಜೆರೋಮ್ ಜಾರ್ಜ್, ಕುಟುಂಬಶ್ರೀ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ದಿನೇಶನ, ಶುಚಿತ್ವ ಮಿಷನ್‍ಕಾರ್ಯನಿರ್ವಾಹಕ ನಿರ್ದೇಶಕ ಯು.ವಿ. ಜೋಸ್, ಚುನಾವಣಾ ಆಯೋಗದ ಕಾರ್ಯದರ್ಶಿ ಬಿ.ಎಸ್. ಪ್ರಕಾಶ್, ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.




