ನವದೆಹಲಿ: ಲಡಾಖ್‌ನಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಸಂಜೆ 4ರ ನಂತರ ಯಾವುದೇ ಹಿಂಸಾತ್ಮಕ ಘಟನೆಗಳು ನಡೆದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿದೆ.
ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಳೆಯ ಹಾಗೂ ಪ್ರಚೋದನಕಾರಿ ವಿಡಿಯೊಗಳನ್ನು ಪ್ರಸಾರ ಮಾಡದಂತೆಯೂ ಒತ್ತಾಯಿಸಿದೆ.
'ದುರದೃಷ್ಟವಶಾತ್ ಬೆಳಿಗ್ಗೆ ನಡೆದ ಘಟನೆಗಳನ್ನು ಹೊರತುಪಡಿಸಿ, ಲಡಾಖ್‌ನಲ್ಲಿ ಪರಿಸ್ಥಿತಿಯನ್ನು ಸಂಜೆ 4ರ ಹೊತ್ತಿಗೆ ನಿಯಂತ್ರಣಕ್ಕೆ ತರಲಾಗಿದೆ' ಎಂದು ತಿಳಿಸಲಾಗಿದೆ.
ಸಾಂವಿಧಾನಿಕವಾಗಿ ರಕ್ಷಣೆಗಳನ್ನು ಒದಗಿಸುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದೂ ಒತ್ತಿ ಹೇಳಿದೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲೇಹ್‌ನಲ್ಲಿ ಬುಧವಾರ ಆರಂಭವಾದ ಶಾಂತಿಯುತ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ನಾಲ್ವರು ಮೃತಪಟ್ಟಿದ್ದಾರೆ. 40 ಪೊಲೀಸರೂ ಸೇರಿದಂತೆ 80ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪಟ್ಟಣದಾದ್ಯಂತ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್ ಪ್ರಯೋಗಿಸಿದ್ದಾರೆ.




