ನವದೆಹಲಿ: ಹಿಂಡನ್‌ಬರ್ಗ್ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ನೇತೃತ್ವದ ಉದ್ಯಮ ಸಮೂಹಕ್ಕೆ ಸೆಬಿ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಕಿಡಿಕಾರಿದ್ದು, ಅದಾನಿ ಹಗರಣದ ತನಿಖೆಯನ್ನು ಎಲ್ಲಾ ಆಯಾಮಗಳಿಂದಲೂ ಮುಂದುವರಿಸುವುದು ಅಗತ್ಯವಿದೆ ಎಂದು ಶುಕ್ರವಾರ ಹೇಳಿದೆ.
ಈ ಸಂಬಂಧ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಶ್ನೆಗಳ ಸರಮಾಲೆಯನ್ನೇ ಕೇಳಿರುವ ಜೈರಾಮ್, ಸರ್ಕಾರಿ ಸಂಸ್ಥೆಗಳಾದ ಇ.ಡಿ. ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ನೇತೃತ್ವದ ಉದ್ಯಮ ಸಮೂಹವು ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರುವ ಕೆಲಸಗಳಲ್ಲಿ ತೊಡಗಿದ್ದ ಆರೋಪದಿಂದ ಮುಕ್ತವಾಗಿವೆ. ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಈ ಆರೋಪ ಹೊರಿಸಿತ್ತು.
ಆರೋಪದ ಕುರಿತಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತನಿಖೆ ನಡೆಸಿತ್ತು. ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಸೆಬಿ ಹೇಳಿತ್ತು.
ಹಿಂಡನ್‌ಬರ್ಗ್ ಆರೋಪ ಸಂಬಂಧ ಸುಪ್ರೀಂ ಕೋರ್ಟ್ ಸೆಬಿಗೆ ತನಿಖೆ ನಡೆಸುವಂತೆ ಆದೇಶಿಸಿತ್ತು. 22 ಹಗರಣಗಳ ಪೈಕಿ 2ರಲ್ಲಿ ಮಾತ್ರವೇ ಸೆಬಿ ಕ್ಲೀನ್ ಚಿಟ್ ನೀಡಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಗ್ರೂಪ್, ಲಾಭಕ್ಕಾಗಿ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಂತಹ ಮೂಲಸೌಕರ್ಯಗಳ ಖಾಸಗೀಕರಣ, ಗುಜರಾತ್‌ನ ಅದಾನಿ ವಿದ್ಯುತ್ ಸ್ಥಾವರಗಳಿಂದ ಪಡೆಯುವ ವಿದ್ಯುತ್ ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ಬಗ್ಗೆ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸುವುದಾಗಿ ಜೈರಾಮ್ ಹೇಳಿದ್ದಾರೆ.




