ನ್ಯೂಯಾರ್ಕ್ : ನ್ಯೂಯಾರ್ಕ್ ಮೇಯರ್ ಹುದ್ದೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಅವರ ಬೆಂಬಲಕ್ಕೆ ಹೆಚ್ಚಿನ ಡೆಮೋಕ್ರಾಟ್‌ಗಳು ನಿಂತಿದ್ಧಾರೆ. ಆದರೆ, ಅವರು ಇನ್ನೂ ತಮ್ಮ ನಗರದ ಕೆಲವರಿಂದ ಅನುಮೋದನೆಗಾಗಿ ಕಾಯುತ್ತಿದ್ದಾರೆ.
ಈ ವಾರ, ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಮತ್ತು ರಾಜ್ಯ ಅಸೆಂಬ್ಲಿ ಸ್ಪೀಕರ್ ಕಾರ್ಲ್ ಹೀಸ್ಟಿ ಅವರು ಮಮ್ದಾನಿಗೆ ಅನುಮೋದನೆ ಘೋಷಿಸಿದರು. ಇದರೊಂದಿಗೆ ಅವರು, ರಾಜ್ಯದ ಇಬ್ಬರು ಅತ್ಯಂತ ಶಕ್ತಿಶಾಲಿ ಡೆಮೋಕ್ರಾಟ್ ಗಳ ಬೆಂಬಲ ಪಡೆದಂತಾಗಿದೆ. ಆದರೆ, ಸೆನೆಟ್ ಅಲ್ಪಸಂಖ್ಯಾತ ನಾಯಕ ಚಕ್ ಶುಮರ್ ಮತ್ತು ಸದನದ ಅಲ್ಪಸಂಖ್ಯಾತ ನಾಯಕ ಹಕೀಮ್ ಜೆಫ್ರಿಸ್ರಂತಹ ಕಾಂಗ್ರೆಸ್ ನಾಯಕರು ಇನ್ನೂ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಇದು ಆ ರಾಜ್ಯ ಮತ್ತು ಫೆಡರಲ್ ವ್ಯಕ್ತಿಗಳು ಎದುರಿಸುತ್ತಿರುವ ವಿಭಿನ್ನ ರಾಜಕೀಯ ಒತ್ತಡಗಳನ್ನು ಸೂಚಿಸುತ್ತದೆ. ಜೂನ್‌ನಲ್ಲಿ ನಡೆದ ಡೆಮಾಕ್ರಟಿಕ್ ಮೇಯರ್ ಪ್ರಾಥಮಿಕ ಚುನಾವಣೆಯಲ್ಲಿ ಮಮ್ದಾನಿ ಅವರು ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.
ನ್ಯೂಯಾರ್ಕ್ ನಗರ ಮತ್ತು ಇತರೆಡೆ ಪ್ರಗತಿಪರರಲ್ಲಿ ಹೆಚ್ಚುತ್ತಿರುವ ಶಕ್ತಿಯನ್ನು ಎಷ್ಟರ ಮಟ್ಟಿಗೆ ಒಪ್ಪಬೇಕು ಎಂಬುದರ ಬಗ್ಗೆ ಡೆಮಾಕ್ರಟಿಕ್ ಪಕ್ಷದ ನಾಯಕರು ಸಂಪೂರ್ಣವಾಗಿ ನಿರ್ಧರಿಸಿಲ್ಲ ಎಂಬುದನ್ನು ಕೂಡ ಇದು ತೋರಿಸುತ್ತದೆ.
ಮಮ್ದಾನಿ ಅವರನ್ನು ಅನುಮೋದಿಸುವ ತಮ್ಮ ನಿರ್ಧಾರ ಪ್ರಕಟಿಸಿದ ಹೊಚುಲ್, ಮಮ್ದಾನಿಯೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ, ಅವರು ನ್ಯೂಯಾರ್ಕ್ ನಗರದ ನಿವಾಸಿಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಮೇಲೆ ಗಮನವಿಟ್ಟಿರುವ ಬಗ್ಗೆ ಪ್ರಸ್ತಾಪಿಸಿದ್ಧಾರೆ. ನ್ಯೂಯಾರ್ಕ್ ರಾಜ್ಯ ಮತ್ತು ನ್ಯೂಯಾರ್ಕ್ ನಗರ ನಮ್ಮನ್ನು ವಿಭಜಿಸಲು ಪ್ರಯತ್ನಿಸುವವರ ವಿರುದ್ಧ ನಾವು ಒಟ್ಟಾಗಿ ನಿಂತಾಗಲೇ ಉತ್ತಮ ಸ್ಥಿತಿಗೆ ಬರಲು ಸಾಧ್ಯ ಎಂದು ಹೊಚುಲ್ ಹೇಳಿದ್ದಾರೆ.
ಮಮ್ದಾನಿಯನ್ನು ಬೆಂಬಲಿಸಿರುವ ಹೀಸ್ಟಿ, ನ್ಯೂಯಾರ್ಕ್ ನಗರಕ್ಕೆ ಉತ್ತಮ ಆಡಳಿತ ನೀಡಬಲ್ಲ ಆಶಾವಾದಿಯಾಗಿ ಮಮ್ದಾನಿಯನ್ನು ನೋಡಿದ್ದಾರೆ. ಈ ನಗರ ಹೊಸ ಮತ್ತು ವಿಭಿನ್ನವಾದುದಕ್ಕಾಗಿ ಹಂಬಲಿಸುತ್ತಿದೆ. ಈ ನಗರ ಹೇಗಿರಬಹುದು ಮತ್ತು ಹೇಗಿರಬೇಕು ಎಂಬುದರ ಬಗ್ಗೆ ಮಮ್ದಾನಿಗೆ ಸ್ಪಷ್ಟ ದೃಷ್ಟಿಕೋನವಿದೆ ಎಂದು ಹೀಸ್ಟಿ ಹೆಳಿದ್ಧಾರೆ.
ಈ ಬೆಳವಣಿಗೆ ಬಳಿಕ ಮಾತನಾಡಿರುವ ಮಮ್ದಾನಿ, ಇದು ಏಕತೆಯ ಸಮಯ. ಇದು ಒಂದೇ ಧ್ವನಿಯಲ್ಲಿ ಮಾತನಾಡಬೇಕಿರುವ ಸಮಯ.
ನ್ಯೂಯಾರ್ಕ್ ನಿವಾಸಿಗಳು ತಮ್ಮ ನಾಯಕರು ಏನು ಮಾಡುತ್ತಿದ್ದಾರೆಂದು ತಮ್ಮನ್ನು ತಾವು ಕೇಳಿಕೊಂಡಾಗ, ಗವರ್ನರ್ ಮತ್ತು ಮೇಯರ್ ಜನರಿಗಾಗಿ ಹೋರಾಡಲು ಕೈಜೋಡಿಸುತ್ತಿದ್ದಾರೆ ಎಂದು ಅವರಿಗೆ ತಿಳಿಯಲಿದೆ ಎಂದು ಹೇಳಿದ್ಧಾರೆ.
ಆದರೆ, ಮಮ್ದಾನಿ ಅವರ ಬಳಿ ನ್ಯೂಯಾರ್ಕ್‌ನ ಅತ್ಯಂತ ಪ್ರಭಾವಿ ಡೆಮೋಕ್ರಾಟ್‌ಗಳೆಲ್ಲರೂ ಇಲ್ಲ ಎಂಬುದು ಗಮನಿಸಬೇಕಿರುವ ಸಂಗತಿ. ಕಾಂಗ್ರೆಸ್‌ನಲ್ಲಿ ಉನ್ನತ ಡೆಮೋಕ್ರಾಟ್ ಶಾಸಕರಾಗಿರುವ ನ್ಯೂಯಾರ್ಕ್ ನಿವಾಸಿಗಳಾದ ಶುಮರ್ ಮತ್ತು ಜೆಫ್ರಿಸ್ ಅವರು ಮಮ್ದಾನಿಯಿಂದ ದೂರ ಉಳಿದಿದ್ದಾರೆ. ನ್ಯೂಯಾರ್ಕ್‌ನ ಮತ್ತೊಬ್ಬ ಸೆನೆಟರ್ ಮತ್ತು ಸೆನೆಟ್ ಡೆಮೋಕ್ರಾಟ್‌ಗಳ ಪ್ರಚಾರ ವಿಭಾಗದ ನಾಯಕಿ ಕಿರ್ಸ್ಟನ್ ಗಿಲ್ಲಿ ಬ್ರಾಂಡ್ ಕೂಡ ಈ ಸಾಲಿನಲ್ಲಿದ್ದಾರೆ. ಇಸ್ರೇಲ್ ಮತ್ತು ಗಾಝಾ ಪಟ್ಟಿಯಲ್ಲಿ ಹಮಾಸ್‌ನೊಂದಿಗಿನ ಅದರ ಯುದ್ಧದ ಬಗ್ಗೆ ಮಮ್ದಾನಿ ನಿಲುವಿನ ಬಗ್ಗೆ ಅವರು ಟೀಕಿಸಿದ್ದರು. ನಂತರದ ಸಂದರ್ಶನವೊಂದರಲ್ಲಿ ಮಮ್ದಾನಿ ಬಗ್ಗೆ ತಪ್ಪಾಗಿ ಹೇಳಿರುವ ಬಗ್ಗೆ ಅವರು ಕ್ಷಮೆಯಾಚಿಸಿದ್ದರು.
ಶುಮರ್ ಮತ್ತು ಜೆಫ್ರಿಸ್ ಅವರು ಮಮ್ದಾನಿ ಬೆಂಬಲಿಸುವ ವಿಷಯದಲ್ಲಿ ಮೀನಮೇಷ ಎಣಿಸುತ್ತಿರುವುದು ಕೆಲವು ಪ್ರಗತಿಪರರ ಸಿಟ್ಟಿಗೆ ಕಾರಣವಾಗಿದೆ. ಮೇರಿಲ್ಯಾಂಡ್‌ನ ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ ಇತ್ತೀಚೆಗೆ ಅಯೋವಾ ಡೆಮೋಕ್ರಾಟ್‌ಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಅವರಿಬ್ಬರೂ ಅನುಮೋದನೆ ನೀಡದಿರುವುದನ್ನು ಟೀಕಿಸಿದ್ದಾರೆ.
ಇನ್ನೊಂದೆಡೆ, ಡೆಮಾಕ್ರಟಿಕ್ ನಾಯಕತ್ವ ಅನುಮೋದನೆಯಲ್ಲಿ ಹಿಂಜಿರಿಕೆ ತೋರುತ್ತಿರುವುದು ಸ್ವಲ್ಪ ಗೊಂದಲಮಯವಾಗಿದೆ ಎಂದು ಸೆನೆಟರ್ ಬರ್ನಿ ಸ್ಯಾಂಡರ್ಸ್ ಹೇಳಿದ್ಧಾರೆ. ಡೆಮಾಕ್ರಟಿಕ್ ನಾಯಕತ್ವ ಪ್ರಾಥಮಿಕ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯನ್ನು ಏಕೆ ಒಮ್ಮತದಿಂದ ಬೆಂಬಲಿಸುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ತೀವ್ರ ಉತ್ಸಾಹ ಸೃಷ್ಟಿಸಿರುವ, ಭರವಸೆ ಮೂಡಿಸಿರುವ ಆ ಅಭ್ಯರ್ಥಿಯನ್ನು ಏಕೆ ಬೆಂಬಲಿಸುತ್ತಿಲ್ಲ ಎಂದು ಸೆನೆಟರ್ ಬರ್ನಿ ಸ್ಯಾಂಡರ್ಸ್ ಪ್ರಶ್ನಿಸಿದ್ದಾರೆ.
ಇದರ ನಡುವೆಯೂ, ಪ್ರಮುಖ ನ್ಯೂಯಾರ್ಕ್ ಡೆಮೋಕ್ರಾಟ್‌ಗಳ ನಡುವೆ ಹೊಂದಾಣಿಕೆಯ ಕೆಲವು ಲಕ್ಷಣಗಳು ಗೋಚರಿಸಿವೆ. ಮಮ್ದಾನಿ ಇಬ್ಬರೂ ನಾಯಕರನ್ನು ಭೇಟಿಯಾಗಿದ್ದಾರೆ. ಅವರ ಉಮೇದುವಾರಿಕೆಯ ಬಗ್ಗೆ ಕೆಲ ಸಂದೇಹಗಳನ್ನು ವ್ಯಕ್ತಪಡಿಸಿದ ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಇತರ ಸಮುದಾಯಗಳ ನಾಯಕರೊಂದಿಗೆ ಖಾಸಗಿಯಾಗಿ ಅವರು ಮಾತನಾಡುತ್ತಿದ್ದಾರೆ.
ಮಮ್ದಾನಿಯನ್ನು ಅಷ್ಟಾಗಿ ತಿಳಿದಿಲ್ಲ ಎಂದು ಕಳೆದ ತಿಂಗಳು ಸಂದರ್ಶನವೊಂದರಲ್ಲಿ ಜೆಫ್ರಿಸ್ ಹೇಳಿದ್ದಾರೆ. ಆದರೆ, ಮಮ್ದಾನಿಯನ್ನು ಹೊರತುಪಡಿಸಿ ಬೇರೆ ಯಾವುದೇ ಮೇಯರ್ ಅಭ್ಯರ್ಥಿಯನ್ನು ಭೇಟಿಯಾಗಲು ನಿರ್ಧರಿಸಿಲ್ಲ ಎಂದು ಜೆಫ್ರಿಸ್ ಹೇಳಿರುವುದು ಕೂಡ ಗಮನ ಸೆಳೆದಿದೆ.
ಈ ನಡುವೆ ಬಂದಿರುವ ಕೆಲವು ವಿಶ್ಲೇಷಣೆಗಳ ಪ್ರಕಾರ, ವಾಷಿಂಗ್ಟನ್‌ನಲ್ಲಿ ಡೆಮೋಕ್ರಾಟ್ಗಳನ್ನು ಮುನ್ನಡೆಸುವ ನ್ಯೂಯಾರ್ಕ್ ನಿವಾಸಿಗಳಾಗಿ ಶುಮರ್ ಮತ್ತು ಜೆಫ್ರಿಸ್ ಎದುರು ಇತರ ಡೆಮೋಕ್ರಾಟ್ಗಳಿಗಿಂತ ವಿಭಿನ್ನ ರಾಜಕೀಯ ಒತ್ತಡ ಇದೆ. ಕಳೆದ ವರ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆದ್ದ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ನಿಯಂತ್ರಣವನ್ನು ಮರಳಿ ಪಡೆಯಲು ಒಂದು ಮಾರ್ಗ ರೂಪಿಸುವ ಯತ್ನ ನಡೆದಿದೆ ಎನ್ನಲಾಗುತ್ತಿದೆ. ರಿಪಬ್ಲಿಕನ್ ಗುಂಪುಗಳು ಈಗಾಗಲೇ ಮಮ್ದಾನಿಯನ್ನು ಬಳಸಿಕೊಂಡು ಡೆಮೋಕ್ರಾಟ್ಗಳು ತುಂಬಾ ಉದಾರವಾದಿಗಳು ಎಂದು ವಾದಿಸುತ್ತಿರುವ ಬಗ್ಗೆ ಹೇಳುತ್ತಿವೆ.
ಮಮ್ದಾನಿ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ. ಪಂಜಾಬಿ ಮೂಲದ ಮೀರಾ ನಾಯರ್, ಮಾನ್ಸೂನ್ ವೆಡ್ಡಿಂಗ್, ಸಲಾಮ್ ಬಾಂಬೆ, ದಿ ನೇಮ್ ಸೇಕ್, ಮಿಸ್ ಸಿಪಿ ಮಸಾಲಾ. ಮಾನ್ಸೂನ್ ವೆಡ್ಡಿಂಗ್ ಮೊದಲಾದ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಮಮ್ದಾನಿ ತಂದೆ ಗುಜರಾತ್ ಮೂಲದವರು. ಅವರು ಉಗಾಂಡಾದಲ್ಲಿ ವಾಸಿಸುತ್ತಿದ್ದಾರೆ. ಈಗ ಅವರು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಝೊಹ್ರಾನ್ ಮಮ್ದಾನಿಯ ಗೆಲುವು ರಾಜಕೀಯ ಗೆಲುವು ಮಾತ್ರವಾಗದೆ, ಭಾರತೀಯರ, ಮುಸ್ಲಿಂ ಸಮುದಾಯದ ಗೆಲುವಾಗಲಿದೆ. ಅದು ಪ್ರಗತಿಪರ ರಾಜಕೀಯಕ್ಕೆ ಸ್ಫೂರ್ತಿಯಾಗಲಿದೆ. ಜೋಹ್ರಾನ್ ಮಮ್ದಾನಿಯ ಹೆಸರು ಈಗ ಅಮೆರಿಕನ್ ರಾಜಕೀಯದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಪ್ರತಿಧ್ವನಿಸುತ್ತಿದೆ. ನವೆಂಬರ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಮಮ್ದಾನಿ ಗೆದ್ದರೆ, ಅವರು ಈ ಅಮೆರಿಕನ್ ಕಾಸ್ಮೋಪಾಲಿಟನ್ ನಗರದ ಮೊದಲ ಭಾರತೀಯ ಮೂಲದ ಮೇಯರ್ ಆಗಲಿದ್ದಾರೆ.




