ಮಲಪ್ಪುರಂ: ಜಿಲ್ಲೆಯ ಕರುಳಾಯಿ ಕಾಡಿನಲ್ಲಿ ವಾಸಿಸುತ್ತಿರುವ ಚೋಳನಾಯ್ಕರ್ ಎನ್ನುವ ಬುಡಕಟ್ಟು ಸಮುದಾಯವನ್ನು ಭೇಟಿಯಾಗಲು ಸಂಸದೆ ಪ್ರಿಯಾಂಕಾ ಗಾಂಧಿ ನಡೆದುಕೊಂಡೇ ತೆರಳಿದ್ದಾರೆ. ಅವರ ತಲ್ಲಣಗಳಿಗೆ ಕಿವಿಯಾಗಿ, ನೆರವು ನೀಡುವ ಭರವಸೆ ನೀಡಿದ್ದಾರೆ.
ಬುಡಕಟ್ಟು ಆರ್ಥಿಕತೆ ಬಗ್ಗೆ ಪಿಎಚ್‌ಡಿ ಮಾಡುತ್ತಿರುವ ಸಿ. ವಿನೋದ್ ಎಂಬವರು ಪ್ರಯಾಣ ವೇಳೆ ಪ್ರಿಯಾಂಕಾ ಗಾಂಧಿಗೆ, ಕಾಡು ಹಾಗೂ ಬುಡಕಟ್ಟು ಸಮುದಾಯದ ಬಗ್ಗೆ ಮಾಹಿತಿ ನೀಡಿದರು. ಬುಡಕಟ್ಟು ಸಮುದಾಯದವರೇ ಆದ ವಿನೋದ್, ಚುನಾವಣಾ ಪ್ರಚಾರದ ವೇಳೆ ತಮ್ಮ ಸಮುದಾಯದ ಪಾಡಿನ ಬಗ್ಗೆ ಪ್ರಿಯಾಂಕಾ ಗಾಂಧಿಗೆ ತಿಳಿಸಿದ್ದಾರೆ. ಇದೀಗ ಅವರ ಮನವಿ ಬೆನ್ನಲ್ಲೇ ಚೋಳನಾಯ್ಕರ್ ಸಮುದಾಯವನ್ನು ಪ್ರಿಯಾಂಕಾ ಗಾಂಧಿ ಭೇಟಿ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅವರನ್ನು ಭೇಟಿ ಮಾಡಿದ ಬಳಿಕ, ಮಾತುಕತೆಗಾಗಿ ಅವರ ಪ್ರತಿನಿಧಿಗಳನ್ನು ಅರಣ್ಯ ಇಲಾಖೆಯ ತಪಾಸಣಾ ಕೇಂದ್ರಕ್ಕೆ ಕರೆದುಕೊಂಡು ಬಂದು, ಮನೆ, ಸೇತುವೆ ಮುಂತಾದ ಅವರ ಬೇಡಿಕೆಗಳನ್ನು ಆಲಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಮುದಾಯದ ಪ್ರತಿನಿಧಿಗಳೊಂದಿಗೆ ಪ್ರಿಯಾಂಕಾ ಗಾಂಧಿ ಮಾತುಕತೆ ನಡೆಸಿದರು. ಬುಡುಕಟ್ಟು ಸಮುದಾಯದವರೊಂದಿಗೆ ಕೆಲಸ ಮಾಡುವವರೊಂದಿಗೂ ಅವರು ಚರ್ಚೆ ನಡೆಸಿದರು ಎಂದು ಪ್ರಕಟಣೆ ಹೇಳಿದೆ.
ಚೋಳನಾಯ್ಕರ್ ಸಮುದಾಯದವರನ್ನು ಭೇಟಿ ಮಾಡಿದ ಬಳಿಕ, ನಿಲಂಬೂರ್ ತೇಗದ ಡಿಪೋಗೆ ಪ್ರಿಯಾಂಕಾ ಭೇಟಿ ನೀಡಿದರು. ಅಲ್ಲಿರುವ ವಸ್ತು ಸಂಗ್ರಹಾಲಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ಬೆಳಿಗ್ಗೆ ನಿಲಂಬೂರ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ವಾಣಿಯಾಂಬಳಂ ರೈಲ್ವೆ ಮೇಲ್ಸೇತುವೆ, ನಿಲಂಬೂರ್ ನಿಲ್ದಾಣದ ನವೀಕರಣ ಹಾಗೂ ಆ ಪ್ರದೇಶದ ಇತರ ರೈಲು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು.




