ಮುಳ್ಳೇರಿಯ: ಪ್ರಭುತ್ವದೊಂದಿಗೆ ಸತ್ಯಹೇಳುವವನಿದ್ದಾಗ ಸುಗಮ ರಾಜ್ಯ ನಿರ್ಮಾಣ ಸಾಧ್ಯವಾಗುತ್ತದೆ. ಅಂತಹ ಸತ್ಯಗಳು ಶ್ರೀಸಾಮಾನ್ಯನ ಬಳಿಯಷ್ಟೇ ಇರುತ್ತದೆ. ಇದು ಸಾಹಿತ್ಯ ಗಂಗೆಯ ರೂಪದಲ್ಲಿ ಪ್ರವಹಿಸಿದಾಗ ಪ್ರಬುದ್ಧ ಸಮಾಜ ಸೃಷ್ಟಿಯಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಎ.ಯು.ಪಿ ಶಾಲೆ ಕುಂಟಾರು ಮತ್ತು ಕನ್ನಡ ಸಂಶೋಧನಾ ಕೇಂದ್ರ ಕಾಸರಗೋಡು ಇವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಗಡಿನಾಡ ಘಟಕ, ಹಳೆವಿದ್ಯಾರ್ಥಿಗಳ ಸಂಘ ಎ.ಯು.ಪಿ.ಶಾಲೆ ಕುಂಟಾರು ಇವರ ಸಹಕಾರದೊಂದಿಗೆ ಕುಂಟಾರು ಶಾಲೆಯಲ್ಲಿ ಭಾನುವಾರ ನಡೆದ ಕುಂಟಾರು ಸಾಹಿತ್ಯೋತ್ಸವ- 2026 ಸಮಾರಂಭದ ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
ಸಾಹಿತ್ಯದಲ್ಲಿ ವ್ಯಕ್ತಿ ಮುಖ್ಯವಲ್ಲ. ಸಾಹಿತ್ಯ ಸಮಾಜದ ಪ್ರತಿಬಿಂಬವಾಗಿದ್ದು, ಸಮಕಾಲೀನ ಬಿಕ್ಕಟ್ಟಿಗೆ ವಿದ್ವತ್ ವಲಯದ ದಾರಿದೀಪವಾಗಿ ಸಾಹಿತ್ಯ ಬೆಳೆದು ಸಮಾಜವನ್ನು ಪೋಷಿಸುತ್ತದೆ. ಹಾಗೆಂದು ಅದು ಪ್ರಭುತ್ವ ವಿರೋಧಿಯಲ್ಲ. ಸಮಾಜದ ವರ್ತಮಾನವನ್ನು ಕಾವ್ಯಗಳ ಮೂಲಕ ಹೇಳುವ ದೀವಿಗೆಯಾಗಿದೆ ಎಂದವರು ತಿಳಿಸಿದರು.
ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಸಾಹಿತ್ಯೋತ್ಸವ ಸಂಯೋಜಕ ಡಾ.ಮೋಹನ ಕುಂಟಾರು ಅಧ್ಯಕ್ಷತೆ ವಹಿಸಿ ಸಾಹಿತ್ಯ, ಸೃಜನಶೀಲ ಬರಹಗಳ ಮೂಲಕ ಸಮಾಜದ ಉತ್ತಮ ಆರೋಗ್ಯ, ಪರಸ್ಪರ ಸಂಬಂಧಗಳನ್ನು ಬೆಸೆದು ಒಗ್ಗೂಡಿಸುವ ಶಕ್ತಿಯುಳ್ಳದ್ದು ಎಂದು ತಿಳಿಸಿ, ಸ್ಥಳೀಯ ಭಾಷೆ, ಸಂಸ್ಕøತಿ ವೈವಿಧ್ಯವನ್ನು ಗುರುತಿಸಿ ಶೋಧಿಸಿ ಬೆಳೆಸುವ ಲಕ್ಷ್ಯ ಒಟ್ಟು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಆಯಿಷಾ ಪೆರ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರವೀಶ ತಂತ್ರಿ ಕುಂಟಾರು, ಕಾರಡ್ಕ ಗ್ರಾ.ಪಂ.ಉಪಾಧ್ಯಕ್ಷ ದಾಮೋದರ ಎಂ, ಕಸಾಪ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕುಂಟಾರು ಶಾಲಾ ವ್ಯವಸ್ಥಾಪಕ ವಿಷ್ಣುಪ್ರಸಾದ್, ಶಾಲಾ ಮಾತೃ ಸಮಿತಿ ಅಧ್ಯಕ್ಷೆ ನವ್ಯಾ ಉಪಸ್ಥಿತರಿದ್ದು ಮಾತನಾಡಿದರು. ರಾಧಾಕೃಷ್ಣ ಮಾಸ್ತರ್ ಸ್ವಾಗತಿಸಿ, ಪ್ರಕಾಶ ಮಾಸ್ತರ್ ವಂದಿಸಿದರು. ಸುಚಿತ್ರ ಟೀಚರ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಂಜೆ 5ರಿಂದ ಡಾ.ವಾಣಿಶ್ರೀ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ಇವರಿಂದ ಭಾವಗಾನಾಮೃತ, ಕುಂಟಾರು ಎಯುಪಿ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಗಮನ ಸೆಳೆದ ಪ್ರದರ್ಶನಗಳು:
ಈ ಸಂದರ್ಭ ಆಯೋಜಿಸಲಾದ ವ್ಯಂಗ್ಯಚಿತ್ರ, ಪುಸ್ತಕ ಹಾಗೂ ಪ್ರಾಚ್ಯವಸ್ತು ಪ್ರದರ್ಶನಗಳು ಗಮನ ಸೆಳೆಯಿತು. ವ್ಯಂಗ್ಯಚಿತ್ರ ಪ್ರದರ್ಶನ ನಡೆದ ವಠಾರದಲ್ಲೇ ಸ್ಥಳದಲ್ಲೇ ಆಸಕ್ತರ ಚಿತ್ರ ಬಿಡಿಸುವ ಕಲಾವಿದರೊಬ್ಬರ ಸುತ್ತಲೂ ಜನಜಂಗುಳಿ ಕಂಡುಬಂತು. ಕೈಬರಹದ (ಹಸ್ತಪ್ರತಿ) ಹಲವುಯ ಪುಸ್ತಕಗಳು ಕುಂಟಾರು ಪರಿಸರದ ಜನರ ಓದುವ ಆಸಕ್ತಿಯನ್ನು ಜಾಹಿರುಗೊಳಿಸುವ ಮೂಲಕ ಅಚ್ಚರಿಮೂಡಿಸಿತು. ಹಲವು ಪುರಾಣ ಸಹಿತ ಹಲವು ಪ್ರಾಚೀನ ಕೃತಿಗಳ ಕೈಬರಹ ಮತ್ತು ಮುದ್ರಿತ ಪುಸ್ತಕಗಳು ಪ್ರದರ್ಶನದಲ್ಲಿದ್ದವು. ಜೊತೆಗೆ ಪ್ರಾಚ್ಯವಸ್ತುಗಳ ಪ್ರದರ್ಶನವೂ ವಿಶೇಷ ಆಕರ್ಷಣೆ ಮೂಡಿಸಿತು. ಅಯೋಧ್ಯೆಯಿಂದ ತಂದ ಕಲ್ಲು, ಪ್ರಾಚೀನ ದೀಪ, ನೇಗಿಲು, ಬಟ್ಟೆ ಸಹಿತ ವಿವಿಧ ವಸ್ತುಗಳನ್ನು ಪೇರಿಸಲಿರುವ ಪೆಟ್ಟಿಗೆ, ಶಾವಿಗೆ ಮಣೆ ಮೊದಲಾದವುಗಳು ಕುತೂಹಲ ಮೂಡಿಸಿತು.

.jpg)
.jpg)


