ಜೋಧಪುರ್: ಆರೆಸ್ಸೆಸ್ನ ಅಖಿಲ ಭಾರತ ಸಮನ್ವಯ ಸಭೆ (RSS Akhila Bharatiya Samanvay Baithak) ಸಮಾರೋಪಗೊಂಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯ ಶತಮಾನೋತ್ಸವ ಆಚರಣೆಯ ಯೋಜನೆಗಳನ್ನು ಈ ಮೂರು ದಿನಗಳ ಬೈಠಕ್ನಲ್ಲಿ ಚರ್ಚಿಸಲಾಯಿತು.
ಶಿಕ್ಷಣ, ಸಮಾಜ ಮತ್ತು ರಾಷ್ಟ್ರೀಯ ಜೀವನದ ವಿವಿಧ ಆಯಾಮಗಳನ್ನೂ ಚರ್ಚಿಸಲಾಯಿತು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೆಸ್ಸೆಸ್ನ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಆಗಿರುವ ಸುನೀಲ್ ಅಂಬೇಕರ್ ಅವರು ಸಮನ್ವಯ್ ಬೈಠಕ್ನಲ್ಲಿ ಚರ್ಚಿತವಾದ ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡರು.
ಜೋಧಪುರ್ನ ಲಾಲ್ಸಾಗರ್ನಲ್ಲಿ ಸೆಪ್ಟೆಂಬರ್ 5ರಿಂದ 7ರವರೆಗೆ ಆರೆಸ್ಸೆಸ್ ಸಮನ್ವಯ್ ಬೈಠಕ್ ನಡೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ಆರೆಸ್ಸೆಸ್ನ ವಿವಿಧ ಸಂಘಟನೆಗಳಾದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ, ವಿದ್ಯಾಭಾರತಿ, ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್, ಭಾರತೀಯ ಶಿಕ್ಷಣ್ ಮಂಡಲ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಮೊದಲಾದವು ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ಅನುಭವ ಹಂಚಿಕೊಂಡವು ಎಂದು ಸುನೀಲ್ ಅಂಬೇಕರ್ ಹೇಳಿದ್ದಾರೆ.
ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಉತ್ತೇಜಿಸಲು ಯತ್ನಿಸಲಾಗುತ್ತಿದೆ. ಶಿಕ್ಷಣವನ್ನು ಹೆಚ್ಚು ಸಮರ್ಪಕಗೊಳಿಸಲು ಪಠ್ಯಪುಸ್ತಕಗಳ ಮರುರಚನೆ ಮಾಡಲಾಗುತ್ತಿದೆ. ಭಾರತೀಯ ಜ್ಞಾನ ಪರಂಪರೆ ಮತ್ತು ಭಾರತೀಯತೆಯನ್ನು ಪ್ರಚುರಗೊಳಿಸುವಂತೆ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅಂಬೇಕರ್ ಹೇಳಿದ್ದಾರೆ.
ಆರೆಸ್ಸೆಸ್ನ ಈ ಅಖಿಲ ಭಾರತೀಯ ಸಮನ್ವಯ್ ಬೈಠಕ್ನಲ್ಲಿ ದೇಶದ ಸಾಮಾಜಿಕ ಸ್ಥಿತಿ ಬಗ್ಗೆಯೂ ಚರ್ಚಿಸಲಾಯಿತು. ಮತಾಂತರ ಸಮಸ್ಯೆ, ಪಂಜಾಬ್ನಲ್ಲಿ ಯುವಕರ ಡ್ರಗ್ ವ್ಯಸನ ಇತ್ಯಾದಿ ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತವಾಗಿದೆ. ಅಕ್ರಮ ಬಾಂಗ್ಲಾ ವಲಸಿಗರು, ಪಶ್ಚಿಮ ಬಂಗಾಳದಲ್ಲಿ ನಾಗರಿಕ ಸುರಕ್ಷತೆ ಇತ್ಯಾದಿ ಬೆಳವಣಿಗೆಗಳ ಬಗ್ಗೆಯೂ ಆತಂಕ ವ್ಯಕ್ತವಾಯಿತು.
ಬುಡಕಟ್ಟು ಪ್ರದೇಶಗಳಲ್ಲಿ ನಕ್ಸಲ್ ಮತ್ತು ಮಾವೋವಾದಿ ಹಿಂಸಾಚಾರಗಳು ಕಡಿಮೆ ಆಗಿದೆಯಾದರೂ ಸಮಾಜವನ್ನು ದಾರಿತಪ್ಪಿಸುವ ಪ್ರಯತ್ನಗಳು ಮುಂದುವರಿಯುತ್ತಿವೆ ಎಂದು ವಿವಿಧ ಸಂಘಟನೆಗಳು ಮಾಹಿತಿ ಹಂಚಿಕೊಂಡವು. ಆರೆಸ್ಸೆಸ್ನ ವನವಾಸಿ ಕಲ್ಯಾಣ ಆಶ್ರಮವು ಮಾಡುತ್ತಿರುವ ಕೆಲಸಗಳ ವಿವರ ಹಂಚಿಕೊಳ್ಳಲಾಯಿತು.




