ನವದೆಹಲಿ: ವಿದ್ಯನ್ಮಾನ ಮತ ಯಂತ್ರ (ಇವಿಎಂ) ಮತಪತ್ರಗಳ ವಿನ್ಯಾಸ ಮತ್ತು ಮುದ್ರಣದಲ್ಲಿ ಬದಲಾವಣೆ ಮಾಡುವುದಾಗಿ ಭಾರತೀಯ ಚುನಾವಣಾ ಆಯೋಗ ಬುಧವಾರ ತಿಳಿಸಿದೆ.
ಇದೇ ಮೊದಲ ಬಾರಿಗೆ ಮತಪತ್ರಗಳಲ್ಲಿ ಬದಲಾವಣೆ ತರಲು ಮುಂದಾಗಿರುವ ಆಯೋಗ, ಸುಲಭವಾಗಿ ಓದಲು ಸಹಾಯವಾಗಲು ಮತ್ತು ಮತದಾರ ಸ್ನೇಹಿ ಮತಪತ್ರಗಳ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.
ಈ ಬದಲಾವಣೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ಬಿಹಾರದ ವಿಧಾನಸಭಾ ಚುನಾವಣೆಯಿಂದ ಆರಂಭಿಸಲಾಗುವುದು ಎಂದು ಹೇಳಿದೆ.
ಮಾರ್ಗಸೂಚಿಗಳು
ಇವಿಎಂ ಮತಪತ್ರದಲ್ಲಿ ಅಭ್ಯರ್ಥಿಗಳ ಬಣ್ಣದ ಭಾವಚಿತ್ರಗಳನ್ನು ಪ್ರಕಟಿಸಲಾಗುವುದು. ಒಂದು ವೇಳೆ ಅಭ್ಯರ್ಥಿಯು ಕಪ್ಪು-ಬಿಳುಪಿನ ಭಾವಚಿತ್ರ ನೀಡಿದ್ದಲ್ಲಿ ಅದನ್ನೇ ಮುದ್ರಿಸಲಾಗುವುದು * ಭಾವಚಿತ್ರದ ಅಳತೆ 2 ಸೆಂ.ಮೀ X2.5 ಸೆಂ.ಮೀ ಇರಲಿದೆ
ಮತಪತ್ರದ ಒಂದು ಹಾಳೆಯಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳು ಇರುವಂತಿಲ್ಲ. ನೋಟಾ ಆಯ್ಕೆಯು ಕೊನೆಗೆ ಇರಲಿದೆ
ನೋಟಾ ಹಾಗೂ ಅಭ್ಯರ್ಥಿಗಳ ಸಂಖ್ಯೆ 16ಕ್ಕಿಂತ ಕಡಿಮೆ ಇದ್ದಲ್ಲಿ ಪ್ಯಾನೆಲ್‌ನಲ್ಲಿನ ಕೊನೆಯ ಸ್ಥಳವನ್ನು ಖಾಲಿ ಬಿಡಲಾಗುವುದು
ಅಭ್ಯರ್ಥಿಗಳ ಚಿತ್ರ ಉತ್ತಮವಾಗಿ ಗೋಚರವಾಗಬೇಕು ಎಂಬ ದೃಷ್ಟಿಯಿಂದ ಭಾವಚಿತ್ರಕ್ಕೆ ಮೀಸಲಾದ ಜಾಗದ ನಾಲ್ಕನೇ ಮೂರರಷ್ಟು ಸ್ಥಳದಲ್ಲಿ ಅಭ್ಯರ್ಥಿಯ ಮುಖ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಲಾಗುವುದು
ಅಭ್ಯರ್ಥಿಗಳ ಅನುಕ್ರಮ ಸಂಖ್ಯೆ/ನೋಟಾವನ್ನು ಭಾರತೀಯ ಅಂಕಿಗಳಲ್ಲಿಯೇ ಮುದ್ರಿಸಲಾಗುವುದು. ಅಕ್ಷರಗಳ ಫಾಂಟ್ ಗಾತ್ರ 30ರಷ್ಟು ಇರಲಿದ್ದು ದಪ್ಪ ಅಕ್ಷರಗಳನ್ನು ಬಳಸಲಾಗುವುದು
ಅಭ್ಯರ್ಥಿಗಳ ಹೆಸರುಗಳ ಅಕ್ಷರಗಳ ಫಾಂಟ್ ಗಾತ್ರ ಕೂಡ 30 ಇರಲಿದೆ
ಚುನಾವಣಾ ಆಯೋಗದಿಂದ ಯಾವುದೇ ನಿರ್ದಿಷ್ಟ ಸೂಚನೆ ಇಲ್ಲದ ಹೊರತು ಲೋಕಸಭಾ ಚುನಾವಣೆಯ ಮತಪತ್ರವನ್ನು ಬಿಳಿ ಕಾಗದದಲ್ಲಿ ಮತ್ತು ವಿಧಾನಸಭೆಗಳ ಚುನಾವಣೆಯ ಮತಪತ್ರವನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಮುದ್ರಿಸಲಾಗುವುದು
ಇವಿಎಂ ಮತಪತ್ರಗಳನ್ನು ಸರ್ಕಾರಿ ಇಲ್ಲವೇ ಅರೆಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುವುದು. ಒಂದು ವೇಳೆ ಇಂತಹ ಮುದ್ರಣಾಲಯಗಳು ಲಭ್ಯ ಇಲ್ಲದಿದ್ದಲ್ಲಿ ಅಗತ್ಯ ಸಾಮರ್ಥ್ಯವಿರುವ ಖಾಸಗಿ ಮುದ್ರಣಾಲಯಗಳನ್ನು ಆಯ್ಕೆ ಮಾಡಲಾಗುವುದು
'ಇವಿಎಂ ಮತಪತ್ರಗಳ ವಿನ್ಯಾಸ ಮತ್ತು ಮುದ್ರಣಕ್ಕಾಗಿ ಅವುಗಳ ಸ್ಪಷ್ಟತೆ ಮತ್ತು ಓದುವಿಕೆಯನ್ನು ಹೆಚ್ಚಿಸಲು ಚುನಾವಣಾ ನೀತಿ ನಿಯಮಗಳು, 1961 ರ ನಿಯಮ 49B ಅಡಿಯಲ್ಲಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ' ಎಂದು ಆಯೋಗದ ಹೇಳಿಕೆ ತಿಳಿಸಿದೆ.




