ಹೈದರಾಬಾದ್: ಸಿಪಿಐ ಮಾವೋವಾದಿಗಳ ವಕ್ತಾರ ಮತ್ತು ಪಾಲಿಟ್‌ಬ್ಯೂರೊ ಸದಸ್ಯ ಅಭಯ್ ಅವರು ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಲು ಮತ್ತು ಸರ್ಕಾರದ ಜತೆ ಶಾಂತಿ ಮಾತುಕತೆ ನಡೆಸಲು ಇಚ್ಛಿಸಿರುವುದಾಗಿ ಇತ್ತೀಚೆಗೆ ಘೋಷಿಸಿದ್ದನ್ನು ಸಿಪಿಐ ಮಾವೋವಾದಿಗಳ ಕೇಂದ್ರೀಯ ಸಮಿತಿ ಖಂಡಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ಕೇಂದ್ರೀಯ ಸಮಿತಿ ಮತ್ತು ಪಾಲಿಟ್‌ಬ್ಯೂರೊ, 'ಅದು ಕೇವಲ ಅಭಯ್ ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ನಾವು ತಿರಸ್ಕರಿಸುತ್ತೇವೆ ಮತ್ತು ಸಶಸ್ತ್ರ ಹೋರಾಟ ಮುಂದುವರಿಸುತ್ತೇವೆ' ಎಂದು ಹೇಳಿದೆ.
'ಅಭಯ್ ಶರಣಾಗಲು ಬಯಸಿದರೆ, ಅವರು ಮೊದಲು ತಮ್ಮಲ್ಲಿರುವ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನು ಸಿಪಿಐ ಮಾವೋವಾದಿಗಳ ಪಿಜಿಎಲ್‌ಎ (ಪೀಪಲ್ಸ್ ಗೆರಿಲ್ಲಾ ಲಿಬರೇಷನ್ ಆರ್ಮಿ)ಗೆ ಹಸ್ತಾಂತರಿಸಬೇಕು' ಎಂದು ಸೂಚಿಸಿದೆ.
ಕದರಿ ಸತ್ಯನಾರಾಯಣ ಅಲಿಯಾಸ್ ಕೋಸಾ ಮತ್ತು ಕಟ್ಟಾ ರಾಮಚಂದ್ರ ರೆಡ್ಡಿ ಅಲಿಯಾಸ್ ವಿಕಲ್ಪ್ ಅವರು ಈ ಕುರಿತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆದರೆ ಈ ಇಬ್ಬರೂ ಛತ್ತೀಸಗಢದಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟಿದ್ದಾರೆ. ಅವರು ಸಾವಿಗೂ ಮುನ್ನ ಈ ಹೇಳಿಕೆ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.




