HEALTH TIPS

ಕ್ಯಾನ್ಸರ್‌ಗೆ ಹೊಸ ವ್ಯಾಕ್ಸಿನ್, ರಷ್ಯಾದ ಔಷಧಿ ಮಾರಕ ರೋಗಕ್ಕೆ ಆಗುತ್ತಾ ವರ?

ಮಾಸ್ಕೋ: ವಿಶ್ವಾದ್ಯಂತ ಪ್ರತಿವರ್ಷ ಕ್ಯಾನ್ಸರ್‌ಗೆ ತುತ್ತಾಗುವ ಲಕ್ಷಾಂತರ ಮಂದಿಗೆ ನೆಮ್ಮದಿಯ ಸುದ್ದಿಯೊಂದು ಹೊರಬಿದ್ದಿದೆ. ಕ್ಯಾನ್ಸರ್‌ ವಿರುದ್ಧ ರೋಗನಿರೋಧಕ ವ್ಯವಸ್ಥೆ ಅಭಿವೃದ್ಧಿಪಡಿಸುವ ಲಸಿಕೆಯನ್ನು (ವ್ಯಾಕ್ಸಿನ್) ರಷ್ಯಾದ ವಿಜ್ಞಾನಿಗಳು ಇದೀಗ ಅಭಿವೃದ್ಧಿಪಡಿಸಿದ್ದಾರೆ.

ಎಆರ್‌ಎನ್‌ಎ ಆಧರಿತ ಈ ವ್ಯಾಕ್ಸಿನ್‌ ಪೂರ್ವ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಶೇ.100ರಷ್ಟು ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಸಾಬೀತಾಗಿದೆ.

ರಷ್ಯಾ ಸರ್ಕಾರ ಇನ್ನಷ್ಟೇ ಈ ವ್ಯಾಕ್ಸಿನ್‌ಗೆ ಅಂತಿಮ ಒಪ್ಪಿಗೆ ನೀಡಬೇಕಿದೆ. ಅನುಮೋದನೆ ಸಿಕ್ಕರೆ ಇದು ವಿಶ್ವದ ಮೊದಲ ಕ್ಯಾನ್ಸರ್‌ ಲಸಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.

'ಎಂಟರೋಮಿಕ್ಸ್‌' ಹೆಸರಿನ ಈ ವ್ಯಾಕ್ಸಿನ್‌ ಅನ್ನು ಪೂರ್ವ ಕ್ಲಿನಿಕಲ್‌ ಟ್ರಯಲ್‌ನಲ್ಲಿ ದೊಡ್ಡ ಕ್ಯಾನ್ಸರ್‌ ಟ್ಯೂಮರ್‌ಗಳನ್ನು ಹೊಂದಿರುವ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಈ ವೇಳೆ ಕ್ಯಾನ್ಸರ್‌ ನಾಶ ಮಾಡುವ ಮೂಲಕ ಟ್ಯೂಮರ್‌ನ ಗಾತ್ರವನ್ನೂ ಕುಗ್ಗಿಸುವಲ್ಲಿ ವ್ಯಾಕ್ಸಿನ್‌ ಯಶಸ್ವಿಯಾಗಿದೆ ಎಂದು ಈ ವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದ ಫೆಡರಲ್‌ ಮೆಡಿಕಲ್‌ ಆಯಂಡ್‌ ಬಯೋಲಾಜಿಕಲ್‌ ಏಜೆನ್ಸಿ (ಎಫ್‌ಎಂಬಿಎ) ಹೇಳಿದೆ.

ಎಂಆರ್‌ಎನ್‌ಎ ತಂತ್ರಜ್ಞಾನ ಬಳಸಿಕೊಂಡು ಈ ವ್ಯಾಕ್ಸಿನ್‌ ಅಭಿವೃದ್ಧಿಪಡಿಸಲಾಗಿದೆ. ಇದೇ ಮಾದರಿಯಲ್ಲಿ ಕೋವಿಡ್‌-19 ವ್ಯಾಕ್ಸಿನ್‌ ಅನ್ನು ಕೂಡ ಅಭಿವೃದ್ಧಿಪಡಿಸಲಾಗಿತ್ತು. ಆಗ ಕೋವಿಡ್‌ಗೆ ದುರ್ಬಲ ವೈರಸ್‌ ಬಳಸಿಕೊಂಡು ವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದರೆ, ಇಲ್ಲಿ ಕ್ಯಾನ್ಸರ್‌ ಕೋಶಗಳ ವಿರುದ್ಧ ಪ್ರತಿರೋಧಕ ಶಕ್ತಿಯ ಮೂಲಕ ಪ್ರತಿಕ್ರಿಯೆ ನೀಡುವ ಪ್ರೊಟೀನ್‌ ಉತ್ಪಾದಿಸಲು ನಮ್ಮ ದೇಹದ ಜೀವಕೋಶಗಳಿಗೆ ಈ ವ್ಯಾಕ್ಸಿನ್‌ ಉತ್ತೇಜನ ನೀಡುತ್ತದೆ.

3 ವರ್ಷ ಪ್ರೀ ಕ್ಲಿನಿಕಲ್ ಟ್ರಯಲ್‌:

ಈ ವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದ ಫೆಡರಲ್‌ ಮೆಡಿಕಲ್‌ ಆಯಂಡ್‌ ಬಯೋಲಾಜಿಕಲ್‌ ಏಜೆನ್ಸಿ(ಎಫ್‌ಎಂಬಿಎ)ಯ ಮುಖ್ಯಸ್ಥೆ ವೆರೋನಿಕಾ ಸ್ಕೊವತ್ಸೋವಾ ಪ್ರಕಾರ, 'ಮೂರು ವರ್ಷಗಳ ಪೂರ್ವ ಕ್ಲಿನಿಕಲ್‌ ಟ್ರಯಲ್‌ ಸೇರಿ ಹಲವು ವರ್ಷಗಳ ಸಂಶೋಧನೆ ಬಳಿಕ ಈ ವ್ಯಾಕ್ಸಿನ್‌ ಅಭಿವೃದ್ಧಿಪಡಿಸಲಾಗಿದೆ. ಕ್ಲಿನಿಕಲ್‌ ಟ್ರಯಲ್‌ನಲ್ಲಿ ಪದೇ ದೇದೆ ರೋಗಿಗಳಿಗೆ ಈ ವ್ಯಾಕ್ಸಿನ್‌ ನೀಡಿದರೂ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ಸಾಬೀತಾಗಿದೆ. ಕೆಲ ಪ್ರಕರಣಗಳಲ್ಲಿ ಕ್ಯಾನ್ಸರ್‌ ಗೆಡ್ಡೆಯ ಬೆಳವಣಿಗೆ ಶೇ.60ರಿಂದ ಶೇ.80ರಷ್ಟು ನಿಧಾನಗೊಂಡಿದೆ. ಇದು ಕ್ಯಾನ್ಸರ್‌ನಿಂದ ಕ್ಯಾನ್ಸರ್‌ಗೆ ಭಿನ್ನವಾಗಿರುತ್ತದೆ' ಎಂದು ಹೇಳಿದ್ದಾರೆ.

ಯಾವ ಯಾವ ಕ್ಯಾನ್ಸರ್‌ಗೆ ಮದ್ದು?

ಶ್ವಾಸಕೋಶ, ಎದೆ, ದೊಡ್ಡಕರುಳು, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ರೋಗಿಗಳಿಗೆ ಈ ವ್ಯಾಕ್ಸಿನ್‌ನಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ.

- 'ಎಂಟರೋಮಿಕ್ಸ್‌' ಹೆಸರಿನ ವ್ಯಾಕ್ಸಿನ್‌ ಅಭಿವೃದ್ಧಿ
- ಕೋವಿಡ್‌-19 ವ್ಯಾಕ್ಸಿನ್‌ ಮಾದರಿಯ ವ್ಯಾಕ್ಸಿನ್‌
- ಪ್ರೀ ಕ್ಲಿನಿಕಲ್‌ ಟ್ರಯಲ್ನಲ್ಲಿ ಸುರಕ್ಷಿತ ಎಂದು ಸಾಬೀತು
- ಅನುಮೋದನೆ ಸಿಕ್ಕರೆ ವಿಶ್ವದ ಮೊದಲ ಕ್ಯಾನ್ಸರ್‌ ಲಸಿಕೆ ಖ್ಯಾತಿ
- ಎಫ್‌ಎಂಬಿಎಯ ಮುಖ್ಯಸ್ಥೆ ವೆರೋನಿಕಾ ಘೋಷಣೆ

ಹೆಚ್ಚುತ್ತಿದೆ ಕ್ಯಾನ್ಸರ್ ರೋಗಿಗಳ ಸಂಖ್ಯೆ:

ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕ್ಯಾನ್ಸರ್ ಎಂಬ ಮಾರಾಣಾಂತಿಕ ರೋಗಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಶೀಘ್ರದಲ್ಲಿ ಬಿಪಿ, ಶುಗರ್‌ನಂತೆ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಹೆಚ್ಚುವ ಆತಂಕವಿದೆ. ಕೆಮೋ ಥೆರಪಿ ಹಾಗೂ ರೆಡಿಯೋ ಥೆರಪಿಯಂಥ ಚಿಕಿತ್ಸೆಗಳು ಕ್ಯಾನ್ಸರ್‌ಗೆ ಲಭ್ಯವಿದ್ದು, ಇದರ ಸೈಡ್ ಎಫೆಕ್ಟ್ಸ್ ತಡೆದುಕೊಳ್ಳಲು ಸಾಮಾನ್ಯರಿಗೆ ಹಾಗೂ ವೃದ್ಧರಿಗೆ ಕಷ್ಟ. ಇಂಥ ಸಮಯದಲ್ಲಿ ಕ್ಯಾನ್ಸರ್‌ಗೆ ವಿವಿಧ ಔಷಧಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ರಷ್ಯಾದವರ ಈ ಲಸಿಕೆ ದೊಡ್ಡ ವರದಾನವೇ ಸರಿ.

ಸೂಕ್ತ ಜೀವನಶೈಲಿ, ಪ್ಲಾಸ್ಟಿಕ್ ಕಂಟೈನರ್ಸ್‌ನಲ್ಲಿ ಇಡದ ಆಹಾರ ಸೇವನೆ, ಯೋಗ, ಧ್ಯಾನ ಸೇರಿ ಹಲವು ಅತ್ಯುತ್ತಮ ಕ್ರಿಯೆಗಳು ಕ್ಯಾನ್ಸರ್‌ನಿಂದ ಮುಕ್ತಿ ಪಡೆಯಲು ಸಹಾಯಕ ಎನ್ನಬಹುದು. ಆದರೆ, ಯಾವ ಕಾರಣಕ್ಕೆ ಕ್ಯಾನ್ಸರ್ ಎಂಬ ಮಾರಾಣಾಂತಿಕ ರೋಗ ತಗುಲುತ್ತೋ ಗೊತ್ತಿಲ್ಲದ ಕಾರಣ, ಅದಕ್ಕೆ ಸೂಕ್ತ ಔಷಧಿ ಕಂಡು ಹಿಡಿಯುವುದೂ ವೈದ್ಯಕೀಯ ಜಗತ್ತಿಗೆ ದೊಡ್ಡ ಸವಾಲೇ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries