ಗ್ವಾಂಗ್ಜು : ದಕ್ಷಿಣ ಕೊರಿಯದ ಗ್ವಾಂಗ್ಜುನಲ್ಲಿ ನಡೆದ ಪ್ಯಾರಾ ವರ್ಲ್ಡ್ ಆರ್ಚರಿ ಚಾಂಪಿಯನ್ಶಿಪ್‌ನಲ್ಲಿ ಭಾರತದ ಶೀತಲ್ ದೇವಿ ತುರ್ಕಿಯೆ ಅಗ್ರ ಶ್ರೇಯಾಂಕಿತ ಒಝ್ನೂರ್ ಕ್ಯೂರ್ ಗಿರ್ಡಿ ಅವರನ್ನು 146-143 ಅಂಕಗಳಿಂದ ಮಣಿಸಿ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ.
ಈ ಗೆಲುವಿನ ಮೂಲಕ ಶೀತಲ್ ದೇವಿ ತಮ್ಮ ಮೂರನೇ ಪದಕವನ್ನು ಪ್ಯಾರಾ ವರ್ಲ್ಡ್ ಆರ್ಚರಿ ಚಾಂಪಿಯನ್ಶಿಪ್‌ನಲ್ಲಿ ಪಡೆದಂತಾಗಿದೆ. ಇದಕ್ಕೂ ಮೊದಲು ಅವರು ತೋಮನ್ ಕುಮಾರ್ ಜೊತೆಗೂಡಿ ಮಿಶ್ರ ಜೋಡಿ ಸ್ಪರ್ಧೆಯಲ್ಲಿ 152-149 ಅಂಕಗಳಿಂದ ಗ್ರೇಟ್ ಬ್ರಿಟನ್‌ನ ಜೋಡಿ ಗ್ರಿನ್ಹ್ಯಾಮ್ ಮತ್ತು ನಾಥನ್ ಮ್ಯಾಕ್ವೀನ್ ವಿರುದ್ಧ ಕಂಚಿನ ಪದಕ ಗೆದ್ದಿದ್ದರು. ಮಹಿಳೆಯರ ಕಾಂಪೌಂಡ್ ತಂಡದ ಸ್ಪರ್ಧೆಯಲ್ಲಿ ಶೀತಲ್ ಮತ್ತು ಸರಿತಾ ತುರ್ಕಿಯೆ ವಿರುದ್ಧ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕ ಪಡೆದಿದ್ದರು.
ವೈಯಕ್ತಿಕ ಫೈನಲ್ ಪಂದ್ಯ ತೀವ್ರ ಸ್ಪರ್ಧಾತ್ಮಕವಾಗಿತ್ತು. ಮೊದಲ ರೌಂಡ್ 29-29 ಅಂಕಗಳಿಂದ ಸಮಬಲದಲ್ಲಿತ್ತು. ಎರಡನೇ ರೌಂಡ್‌ನಲ್ಲಿ ಶೀತಲ್ ಮೂರು ನಿರಂತರ 10 ಅಂಕ ಗಳಿಸಿ 30-27 ಅಂಕಗಳಿಂದ ಮುನ್ನಡೆ ಪಡೆದರು. ಮೂರನೇ ರೌಂಡ್ ಮತ್ತೆ 29-29 ಅಂಕಗಳಿಂದ ಸಮನಾಗಿ ಮುಗಿಯಿತು. ನಾಲ್ಕನೇ ರೌಂಡ್‌ನಲ್ಲಿ ಒಂದು ಅಂಕ ಕಳೆದುಕೊಂಡರೂ ಶೀತಲ್ 116-114 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡರು. ಅಂತಿಮ ಸುತ್ತಿನಲ್ಲಿ ಚಿನ್ನವನ್ನು ತನ್ನದಾಗಿಸಿಕೊಂಡರು.




