HEALTH TIPS

ದುರಂತಕ್ಕೆ ಸಾಕ್ಷಿಯಾದ ಚಪ್ಪಲಿಗಳ ರಾಶಿ: ಸಂಭ್ರಮ ಶೋಕವಾಗಿ ಬದಲಾದ ಕ್ಷಣ​

ಕರೂರು: ಚಪ್ಪಲಿ, ಶೂಗಳ ರಾಶಿ, ಅಪ್ಪಚ್ಚಿಯಾದ ನೀರಿನ ಬಾಟಲ್‌ಗಳು, ಹರಿದ ಪೋಸ್ಟರ್‌ಗಳ ರಾಶಿ, ಬಟ್ಟೆಗಳ ತುಂಡುಗಳು..ಇವು ಬೆಳಗಿನ ಜಾವ ವಾಯುವಿಹಾರ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಟ ಜನರಿಗೆ ಕಂಡ ದೃಶ್ಯಗಳು.

'ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್‌ ಅವರು ಕರೂರು ಜಿಲ್ಲೆಯಲ್ಲಿ ಶನಿವಾರ ನಡೆಸಿದ ರ‍್ಯಾಲಿಯಲ್ಲಿ ಕಾಲ್ತುಳಿತ ಉಂಟಾದ ಕಾರಣ ಉಸಿರುಗಟ್ಟಿ ಕನಿಷ್ಠ 39 ಮಂದಿ ಮೃತಪಟ್ಟಿದ್ದಾರೆ.

ಘಟನೆಗೆ ಕಾರಣವೇನು ಎಂಬ ಬಗ್ಗೆ ಟಿವಿಕೆ ಕಾರ್ಯಕರ್ತರಾಗಲಿ, ಪದಾಧಿಕಾರಿಗಳಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದ್ದರೂ ಸಾಕಷ್ಟು ಪ್ರಮಾಣದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸುವಲ್ಲಿ ಆಯೋಜಕರು ಮತ್ತು ಜಿಲ್ಲಾ ಪೊಲೀಸರು ವಿಫಲರಾಗಿದ್ದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಕಾಲ್ತುಳಿತಕ್ಕೆ ಕಾರಣವೇನು ಎಂಬುದರ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಆದರೆ ಘಟನೆಗೆ ನಿಖರ ಕಾರಣವೇನು ಎಂಬುವುದು ಸ್ಪಷವಾಗಿಲ್ಲ.

'ನಮ್ಮ ಪ್ರೀತಿಯ ನಾಯಕನ್ನು ನೋಡಲು ಸಂಭ್ರಮದಿಂದ ಬಂದೆವು ಆದರೆ ಅದು ದುರಂತದಲ್ಲಿ ಕೊನೆಗೊಂಡಿತು' ಎಂದು ಕಾಲ್ತುಳಿತ ಸಂಭವಿಸಿದಾಗ ಜನಸಂದಣಿಯಲ್ಲಿದ್ದ ವ್ಯಕ್ತಿಯೊಬ್ಬರು ವಿಷಾದಿಸಿದ್ದಾರೆ.

'ಅಭಿಮಾನಿಗಳು ವಿಜಯ್, ವಿಜಯ್‌ ಎಂದು ಘೋಷಣೆ ಕೂಗುತ್ತಿದ್ದರು. ಆ ವೇಳೆ ಸ್ಥಳದಲ್ಲಿದ್ದ ಬ್ಯಾರಿಕೇಡ್ ತಳ್ಳಿದ್ದರಿಂದ ಅನೇಕರು ಕೆಳಗೆ ಬಿದ್ದರು. ಆ ಸಮಯದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಜನಸಂದಣಿಯಲ್ಲಿ ಸಿಲುಕಿಕೊಂಡು ಕೆಳಗೆ ಬಿದ್ದ ಜನರಿಗೆ ಏನು ನಡೆಯುತ್ತಿದೆ ಎಂಬ ಅರಿವು ಕೂಡ ಇರಲಿಲ್ಲ' ಎಂದು ಅವರು ಹೇಳಿದ್ದಾರೆ.

'ರಾಜಕೀಯ ಪಕ್ಷದ ಕಾರ್ಯಕ್ರಮದಲ್ಲಿ ಕಾಲ್ತುಳಿತದಲ್ಲಿ ಇಷ್ಟೊಂದು ಜನ ಮೃತಪಟ್ಟಿದ್ದನ್ನು ನಾನು ಎಂದಿಗೂ ನೋಡಿಲ್ಲ. ನಟನನ್ನು ನೋಡಲೇಬೇಕೆಂಬ ಯುವಕರ ಅತಿಯಾದ ಉತ್ಸಾಹ ಘಟನೆಗೆ ಕಾರಣ' ಎಂದು ಹಿರಿಯ ನಾಗರಿಕರೊಬ್ಬರು ದೂಷಿಸಿದ್ದಾರೆ.

'ವಿಜಯ್ ಭಾಷಣ ಮಾಡುವಾಗ ವಿದ್ಯುತ್‌ ಕಡಿತಗೊಂಡಿದ್ದು, ಮೈಕ್ರೊ ಫೋನ್‌ ದೋಷದಿಂದಾಗಿ ಅವರ ಧ್ವನಿ ಕೇಳಿಸದಿರುವುದು ಕಾಲ್ತುಳಿತಕ್ಕೆ ಒಂದು ಕಾರಣ' ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

'ನಾವೆಲ್ಲರೂ ವಿಜಯ್‌ಗಾಗಿ ಕಾಯುತ್ತಿದ್ದೆವು. ವಿದ್ಯುತ್ ಸ್ಥಗಿತಗೊಂಡಿತು. ಅವರು ದೋಷಪೂರಿತ ಮೈಕ್ರೊಫೋನ್‌ ಮೂಲಕ ಮಾತನಾಡುತ್ತಿದ್ದರಿಂದ ನಾವೆಲ್ಲರೂ ಅವರ ಮಾತುಗಳನ್ನು ಕೇಳಲು ಮುಂಭಾಗಕ್ಕೆ ಹೋದೆವು. ಕಾಲ್ತುಳಿತಕ್ಕೆ ಅದು ಕೂಡ ಒಂದು ಕಾರಣ' ಎಂದು ಕರೂರಿನ ನಿವಾಸಿ ಸುನೀತಾ ಹೇಳಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ

ಕರೂರು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಹೃದಯ ವಿದ್ರಾವಕ ದೃಶ್ಯಗಳು ಕಂಡುಬಂದವು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.

ಕರೂರಿಗೆ ಸಿಎಂ ಭೇಟಿ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕರೂರು ಆಸ್ಪತ್ರೆಗೆ ಭೇಟಿ ನೀಡಿದ್ದು, ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸಂತ್ರಸ್ತರನ್ನು ಸಮಾಧಾನಪಡಿಸಿ, ಉತ್ತಮ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries