ಕಾಸರಗೋಡು: ಮನುಷ್ಯ -ವನ್ಯ ಜೀವಿ ಸಂಘರ್ಷ ತಡೆಯುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮಲೆನಾಡು ವ್ಯಾಪ್ತಿಯ ಪಂಚಾಯಿತಿಗಳಲ್ಲಿ ಸಹಾಯ ಕೇಂದ್ರವನ್ನು ಆರಂಭಿಸಿದೆ. ಅರಣ್ಯ ಇಲಾಖೆಯ ಸಹಾಯ ಕೇಂದ್ರ ಸೇವೆಯು ಸೆಪ್ಟೆಂಬರ್ 30 ರ ವರೆಗೆ ಲಭ್ಯವಿರುತ್ತದೆ. ಮನುಷ್ಯ-ವನ್ಯಜೀವಿ ಸಂಘರ್ಷಗಳನ್ನು ತಡೆಯುವುದಕ್ಕೆ ಮುಂಜಾಗ್ರತಾ ಕ್ರಮವಾಗಿ ಈ ಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಸೆಪ್ಟೆಂಬರ್ 30 ರವರೆಗೆ ಮುಳಿಯಾರು, ಕಾರಡ್ಕ, ದೇಲಂಪಾಡಿ, ಪನತ್ತಡಿ, ಈಸ್ಟ್ ಎಳೇರಿ, ಬಳಾಲ್ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಅರಣ್ಯ ಇಲಾಖೆ ಕಚೇರಿಗಳಲ್ಲಿ ಈ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸಲಿದೆ.
ಮನುಷ್ಯ- ವನ್ಯ ಜೀವಿ ಸಂಘರ್ಷವನ್ನು ತಡೆಯುವ ನಿರ್ದೇಶಗಳು ಮತ್ತು ಅರಣ್ಯ ಇಲಾಖೆಯ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಸಹಾಯ ಕೇಂದ್ರಗಳಲ್ಲಿ ಸ್ವೀಕರಿಸಲಾಗುತ್ತದೆ. ಪರಿಹರಿಸಬಹುದಾದ ದೂರುಗಳನ್ನು ಈ ಹಂತದಲ್ಲಿಯೇ ಪರಿಹರಿಸಲಾಗುತ್ತದೆ. ಉಳಿದವುಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದದಲ್ಲಿ ಪರಿಗಣಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಅಕ್ಟೋಬರ್ 1 ರಿಂದ 15 ವರೆಗೆ ಮತ್ತು ರಾಜ್ಯ ಮಟ್ಟದಲ್ಲಿ ಅಕ್ಟೋಬರ್ 16 ರಿಂದ 30 ರ ವರೆಗೆ ಇರುತ್ತದೆ. ಮಾನವ ವನ್ಯ ಜೀವಿ ಸಂಘರ್ಷ ಕಡಿಮೆ ಮಾಡುವುದಕ್ಕಾಗಿ ಸಿದ್ಧಪಡಿಸಲಾದ ಯೋಜನೆಗಳನ್ನು ಸೆಪ್ಟೆಂಬರ್ 23 ಮತ್ತು 29 ರಂದು ಆಯಾ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಸಲಹೆಗಳು ಮತ್ತು ಅಭಿಪ್ರಾಯ ಗಳನ್ನೂ ಸ್ವೀಕರಿಸಿದ ನಂತರ ಅಂತಿಮ ಯೋಜನೆಯನ್ನು ಪೂರ್ಣ ಗೊಳಿಸಲಾಗುತ್ತದೆ. ಸಾರ್ವಜನಿಕರು ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿರುವ ಸಹಾಯ ಕೇಂದ್ರದ ಸೇವೆಯನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಅರಣ್ಯಾಧಿಕಾರಿ ಕೆ. ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.




