ಮುಂಬಯಿ: ವಕ್ಫ್ ಕಾಯ್ದೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಸೋಮವಾರ ನೀಡಿದ ಮಧ್ಯಾಂತರ ಆದೇಶವನ್ನು ಕೇಂದ್ರ ಸರಕಾರ ಸ್ವಾಗತಿಸಿದೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವ ಕಿರಣ್ ರಿಜಿಜು, "ಸುಪ್ರೀಂ ಕೋರ್ಟ್ ನೀಡಿರುವಂತಹ ಆದೇಶವು ಭಾರತದ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಸೂಚನೆಯಾಗಿದೆ.
ಈ ಕಾಯ್ದೆಯಲ್ಲಿನ ನಿಬಂಧನೆಗಳು ಇಡೀ ಮುಸ್ಲಿಂ ಸಮುದಾಯಕ್ಕೆ ಅನುಕೂಲ ಕಲ್ಪಿಸುವಂಥದ್ದು. ಸುಪ್ರೀಂಗೆ ಎಲ್ಲ ವಿಚಾರಗಳ ಬಗ್ಗೆಯೂ ತಿಳಿದಿದೆ' ಎಂದರು. ಅಲ್ಲದೆ ಈ ಕಾಯ್ದೆಯಿಂದಾಗಿ ಇನ್ನು ಮುಂದೆ ವಕ್ಫ್ ಮಂಡಳಿಯ ಮೂಲಕ ಆಸ್ತಿಪಾಸ್ತಿಗಳ ಅಕ್ರಮ ಒತ್ತುವರಿಗೆ ಕಡಿವಾಣ ಬೀಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ವಕ್ಫ್ ಕಾಯ್ದೆ ಕುರಿತ ಸುಪ್ರೀಂ ತೀರ್ಪಿಗೆ ವಿಪಕ್ಷಗಳಿಂದ ಸ್ವಾಗತ
ವಕ್ಫ್ ಕಾಯ್ದೆಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನ ಮಧ್ಯಾಂತರ ಆದೇಶವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷ ಕೂಟದ ಪಕ್ಷಗಳು ಸ್ವಾಗತಿಸಿವೆ. ಕಾಯ್ದೆಯ ಕೆಲವು ಪ್ರಮುಖ ವಿವಾದಿತ ನಿಬಂಧನೆಗಳಿಗೆ ನ್ಯಾಯಾಲಯ ತಡೆ ತಂದಿರುವುದು ನ್ಯಾಯ, ಸಮಾನತೆ ಮತ್ತು ಭ್ರಾತೃತ್ವದ ಸಾಂವಿಧಾನಿಕ ಮೌಲ್ಯಗಳಿಗೆ ಸಂದ ಜಯವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಏಕಪಕ್ಷೀಯ ಕಾನೂನಿನ ವಿರುದ್ಧ ಹೋರಾಡಿದ ವಿಪಕ್ಷಗಳು, ಸರಕಾರ ನಿರ್ಲಕ್ಷಿಸಿದ್ದ ಅನೇಕ ವಿಚಾರಗಳ ಬಗ್ಗೆ ಪ್ರತಿರೋಧದ ಟಿಪ್ಪಣಿ ಬರೆದ ಜಂಟಿ ಸಂಸದೀಯ ಸಮಿತಿಯ ಸದಸ್ಯರಿಗೆ ಸಂದ ಜಯವೆಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ನೀಡಿದ್ದಾರೆ. ಆದೇಶವನ್ನು ಡಿಎಂಕೆ ನಾಯಕ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಿಪಿಎಂ ನಾಯಕರೂ ಕೂಡ ಸ್ವಾಗತಿಸಿದ್ದಾರೆ.




