ರಾಂಚಿ: ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ಮೇ 7ರಂದು ಮಧ್ಯರಾತ್ರಿ 1 ಗಂಟೆಗೆ ಆಪರೇಷನ್ ಸಿಂಧೂರ್‌ನ ಮೊದಲ ದಾಳಿ ನಡೆಸಲಾಯಿತು ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಇಂದು ರಾಂಚಿಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಡೆಸಿದ ಮಾರಕ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಮೇ 7ರಂದು ಭಾರತೀಯ ಸಶಶ್ತ್ರ ಪಡೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಾದ್ಯಂತ 9 ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಜಂಟಿ ಮಿಲಿಟರಿ ದಾಳಿ ನಡೆಸಿತ್ತು.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಡೆಸಿದ ಮಾರಕ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ ನಡೆಸಿದ ಸುಮಾರು 5 ತಿಂಗಳ ನಂತರ ಆ ಬಗ್ಗೆ ಸಿಡಿಎಸ್ ಅನಿಲ್ ಚೌಹಾಣ್ ಹೇಳಿಕೆ ನೀಡಿದ್ದಾರೆ. ಇಂದು ಜಾರ್ಖಂಡ್‌ನ ರಾಂಚಿಯಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದದ ಸಂದರ್ಭದಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ನಡೆಸಲಾದ ನಿಖರ ದಾಳಿಗಳನ್ನು ಉಲ್ಲೇಖಿಸಿದ ಅವರು, ರಾತ್ರಿಯ ಸಮಯದಲ್ಲಿ ದೂರದ ಗುರಿಗಳ ಮೇಲೆ ದಾಳಿ ಮಾಡಲು ವಿಶೇಷ ಪ್ರಯತ್ನಗಳು ಬೇಕಾಗುತ್ತವೆ ಎಂದು ಹೇಳಿದರು.
'ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿದೆ. ರಾತ್ರಿಯ ಸಮಯದಲ್ಲಿ ದೂರದ ಗುರಿಗಳಿಗೆ ನಿಖರವಾದ ದಾಳಿಗಳಿಗೆ ವಿಶೇಷ ಪ್ರಯತ್ನಗಳು ಬೇಕಾಗುತ್ತವೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ನಾವು ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.
'ಮೇ 7ರಂದು ಭಯೋತ್ಪಾದಕ ನೆಲೆಗಳ ಗುರಿಗಳನ್ನು ನಾವು ಆಯ್ಕೆ ಮಾಡಿಕೊಂಡಿದ್ದೆವು. ರಾತ್ರಿ 1ರಿಂದ 1.30ರ ನಡುವೆ ನಾವು ಅವರ ಮೇಲೆ ದಾಳಿ ಮಾಡಿದೆವು. ರಾತ್ರಿ 1.30ಕ್ಕೆ ನಾವು ಏಕೆ ದಾಳಿ ಮಾಡಿದೆವು ಎಂದು ನಿಮಗೆ ಗೊತ್ತಾ? ಅದು ಅತ್ಯಂತ ಕತ್ತಲೆಯ ಸಮಯ. ಆಗ ಉಪಗ್ರಹ ಚಿತ್ರಗಳು, ಫೋಟೋಗಳನ್ನು ಪಡೆಯುವುದು ಮತ್ತು ಪುರಾವೆಗಳನ್ನು ಸಂಗ್ರಹಿಸುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಆದರೂ, ನಾವು ರಾತ್ರಿ 1 ಅಥವಾ 1.30ಕ್ಕೆ ದಾಳಿ ಮಾಡಿದೆವು. ಅದು ಏಕೆಂದರೆ, ಎರಡು ಕಾರಣಗಳಿಗಾಗಿ. ಮೊದಲನೆಯದಾಗಿ, ರಾತ್ರಿಯಲ್ಲಿಯೂ ಸಹ ನಾವು ಚಿತ್ರಣವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಮ್ಮ ಸಾಮರ್ಥ್ಯಗಳಲ್ಲಿ ನಮಗೆ ವಿಶ್ವಾಸವಿತ್ತು. ಮತ್ತು ಎರಡನೆಯ ಪ್ರಮುಖ ಕಾರಣವೆಂದರೆ, ನಾವು ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ಬಯಸಿದ್ದೆವು' ಎಂದು ಸಿಡಿಎಸ್ ಚೌಹಾಣ್ ಹೇಳಿದ್ದಾರೆ.
'ಮೇ 8ರ ಬೆಳಿಗ್ಗೆ 5.30ರಿಂದ 6 ಗಂಟೆ ದಾಳಿ ನಡೆಸಲು ನಮಗೆ ಉತ್ತಮ ಸಮಯವಾಗಿತ್ತು. ಆದರೆ ಆ ಸಮಯದಲ್ಲಿ, ಬಹವಾಲ್ಪುರ್ ಮತ್ತು ಮುರಿಯ್ಕೆಯಲ್ಲಿ ಮೊದಲ ಅಜಾನ್ ಅಥವಾ ಮೊದಲ ಪ್ರಾರ್ಥನೆ ನಡೆಯುತ್ತಿತ್ತು. ಆ ಸಮಯದಲ್ಲಿ ಸಾಕಷ್ಟು ಜನರು ಓಡಾಡುತ್ತಿದ್ದರು. ಆಗ ನಾವು ದಾಳಿ ನಡೆಸಿದರೆ ಪಾಕಿಸ್ತಾನದ ಅನೇಕ ಅಮಾಯಕ ಜನರು ಕೊಲ್ಲಲ್ಪಡುವ ಅಪಾಯವಿತ್ತು. ನಾವು ಅದನ್ನು ತಪ್ಪಿಸಲು ಬಯಸಿದ್ದೆವು. ನಮ್ಮ ಗುರಿ ಉಗ್ರರು ಮಾತ್ರ ಆಗಿತ್ತು. ಅದಕ್ಕಾಗಿಯೇ ನಾವು ರಾತ್ರಿ 1ರಿಂದ 1.30ರ ನಡುವಿನ ಸಮಯವನ್ನು ಆರಿಸಿಕೊಂಡೆವು' ಎಂದು ಅವರು ಹೇಳಿದ್ದಾರೆ.
ಹಾಗೇ, ಈ ವರ್ಷ ರಾಷ್ಟ್ರೀಯ ವಿಪತ್ತುಗಳ ಸಂಖ್ಯೆ ಹೆಚ್ಚಾಗಿದ್ದರಿಂದ ನಾಗರಿಕರನ್ನು ರಕ್ಷಿಸಲು ಭಾರತೀಯ ಸೇನೆಯು ಗರಿಷ್ಠ ಪ್ರಯತ್ನಗಳನ್ನು ಮಾಡಿದೆ ಎಂದು ಸಿಡಿಎಸ್ ಅನಿಲ್ ಚೌಹಾಣ್ ಹೇಳಿದರು. ಹೆಚ್ಚಿನ ಸಂಖ್ಯೆಯ ನೈಸರ್ಗಿಕ ವಿಕೋಪಗಳ ನಡುವೆ ನಾಗರಿಕರನ್ನು ರಕ್ಷಿಸಲು ಸಶಸ್ತ್ರ ಪಡೆಗಳು ಈ ವರ್ಷ ಗರಿಷ್ಠ ಪ್ರಯತ್ನಗಳನ್ನು ಮಾಡಿವೆ ಎಂದು ತಿಳಿಸಿದರು.




