ನವದೆಹಲಿ: ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿ ಐರೋಪ್ಯ ಒಕ್ಕೂಟ (ಇಯು) ಹೊಸ ಕಾರ್ಯಸೂಚಿಯನ್ನು ಅನಾವರಣಗೊಳಿಸಿದೆ. ಆದರೆ ಇದಕ್ಕೆ ರಷ್ಯಾದೊಂದಿಗಿನ ಭಾರತದ ನಿಕಟ ಬಾಂಧವ್ಯಕ್ಕೆ ಕರಿನೆರಳು ಬಿದ್ದಿದೆ.
'ರಕ್ಷಣೆ, ವ್ಯಾಪಾರ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದೊಂದಿಗೆ ಬಾಂಧವ್ಯ ಹೆಚ್ಚಿಸಲು ಹೊಸ ಕಾರ್ಯತಂತ್ರದ ಕಾರ್ಯಸೂಚಿಯನ್ನು ಅನಾವರಣಗೊಳಿಸಲಾಗಿದೆ' ಎಂದು ಐರೋಪ್ಯ ಒಕ್ಕೂಟದ ವಿದೇಶಾಂಗ ಹಾಗೂ ಭದ್ರತಾ ನೀತಿಯ ಮುಖ್ಯಸ್ಥೆ ಕಾಜಾ ಕಲ್ಲಾಸ್ ತಿಳಿಸಿದ್ದಾರೆ.
'ಆದರೆ ರಷ್ಯಾದ ಮಿಲಿಟರಿ ಅಭ್ಯಾಸಗಳಲ್ಲಿ ಭಾರತದ ಪಾಲುದಾರಿಕೆ ಹಾಗೂ ರಷ್ಯಾದಿಂದ ತೈಲ ಖರೀದಿಸುವುದು ನಿಕಟ ಬಾಂಧವ್ಯಕ್ಕೆ ಅಡ್ಡಿಯಾಗುತ್ತಿದೆ. ಏಕೆಂದರೆ ಅಂತಿಮವಾಗಿ ನಮ್ಮ ಪಾಲುದಾರಿಕೆಯು ವ್ಯಾಪಾರಕ್ಕಷ್ಟೇ ಸೀಮಿತವಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಹಿತಾಸಕ್ತಿಯ ರಕ್ಷಣೆಯೂ ಆಗಿದೆ' ಎಂದು ಅವರು ಹೇಳಿದ್ದಾರೆ.
'ಭಾರತ ಹಾಗೂ ಯುರೋಪಿನ ಪಾಲುದಾರಿಕೆಯನ್ನು ದ್ವಿಗುಣಗೊಳಿಸುವ ಸಮಯ ಬಂದಿದೆ. ನಮ್ಮ ಬಾಂಧವ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
'ಯುರೋಪ್ ಈಗಾಗಲೇ ಭಾರತದ ಅತಿ ದೊಡ್ಡ ಪಾಲುದಾರರಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ನಾವು ಬದ್ಧರಾಗಿದ್ದೇವೆ. ವ್ಯಾಪಾರಕ್ಕೆ ಯುರೋಪ್ ಮುಕ್ತವಾಗಿದೆ. ಭಾರತದೊಂದಿಗೆ ಹೂಡಿಕೆ ಮಾಡಲು ನಾವು ಸಿದ್ಧರಾಗಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
2026ರಲ್ಲಿ ನಡೆಯಲಿರುವ ಶೃಂಗದಲ್ಲಿ ಎಲ್ಲ ಸವಾಲುಗಳನ್ನು ಮಾತುಕತೆ ಮೂಲಕ ಬಗೆಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೊಸ ಕಾರ್ಯತಂತ್ರದ ಕಾರ್ಯಸೂಚಿಯವನ್ನು ಐರೋಪ್ಯ ಒಕ್ಕೂಟದ 27 ಸದಸ್ಯ ರಾಷ್ಟ್ರಗಳು ಅನುಮೋದಿಸಬೇಕಾಗುತ್ತದೆ.
ಐರೋಪ್ಯ ಕಮಿಷನ್‌ನ ಪ್ರತಿನಿಧಿ ಅವರೊಂದಿಗಿನ ಸಂಭಾಷಣೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಹೊಸ ಕಾರ್ಯತಂತ್ರದ ಕಾರ್ಯಸೂಚಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.




