HEALTH TIPS

ಹತ್ಯೆ ಮಾಡುವ ಉದ್ದೇಶವಿದ್ದರೆ, ಮಾತುಕತೆ ಏಕೆ? ಕತಾರ್‌ ದೊರೆ ಶೇಖ್‌ ತಮೀಮ್ ಆಕ್ರೋಶ

ದುಬೈ: ಕಳೆದ ವಾರ ದೋಹಾದಲ್ಲಿ ಹಮಾಸ್‌ ಮುಖಂಡರನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್‌ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಅರಬ್‌ ಹಾಗೂ ಇಸ್ಲಾಮಿಕ್‌ ರಾಷ್ಟ್ರಗಳ ಒಗ್ಗಟ್ಟು ಪ‍್ರದರ್ಶಿಸುವ ನಿಟ್ಟಿನಲ್ಲಿ ಕತಾರ್‌ ಸೋಮವಾರ ಶೃಂಗಸಭೆ ಆಯೋಜಿಸಿತು.

ಕತಾರ್ ದೊರೆ ಕಿಡಿ: ಶೃಂಗಸಭೆಗೆ ಚಾಲನೆ ನೀಡಿ ಉಗ್ರ ಭಾಷಣ ಮಾಡಿದ ಕತಾರ್‌ ದೊರೆ ಶೇಖ್‌ ತಮೀಮ್ ಬಿನ್ ಹಮದ್‌ ಅಲ್‌ ಥಾನಿ, 'ಗಾಜಾದಲ್ಲಿರುವ ತನ್ನ ಒತ್ತೆಯಾಳುಗಳ ಬಗ್ಗೆ ಇಸ್ರೇಲ್‌ ಯಾವುದೇ ಕಾಳಜಿ ಹೊಂದಿಲ್ಲ.

ಬದಲಾಗಿ, ಗಾಜಾ ಇನ್ನು ಮುಂದೆ ವಾಸಿಸಲು ಯೋಗ್ಯವಾಗಿಲ್ಲ ಎಂಬುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ' ಎಂದು ಕಿಡಿಕಾರಿದರು.

'ಹಮಾಸ್‌ನ ಎಲ್ಲ ನಾಯಕರನ್ನು ಹತ್ಯೆ ಮಾಡುವ ಉದ್ದೇಶ ಹೊಂದಿದ್ದರೆ, ಮಾತುಕತೆಗೆ ಏಕೆ ಮುಂದಾಯಿತು? ಒತ್ತೆಯಾಳುಗಳ ವಿಮೋಚನೆಯನ್ನು ನೀವು ಬಯಸಿದ್ದರೆ, ಎಲ್ಲಾ ಸಂಧಾನಕಾರರನ್ನು ಹತ್ಯೆ ಮಾಡಿದ್ದು ಏಕೆ?' ಎಂದು ಭಾಷಣದಲ್ಲಿ ಪ್ರಶ್ನಿಸಿದ್ದಾರೆ.

ಸಾಮಾನ್ಯವಾಗಿ ಸಮಾಧಾನದಿಂದ ಭಾಷಣ ಮಾಡುವ ದೊರೆ ಶೇಖ್‌ ತಮೀಮ್‌ ಅವರು ಇದೇ ಮೊದಲ ಬಾರಿಗೆ ಶೃಂಗಸಭೆಯಲ್ಲಿ 45 ನಿಮಿಷಗಳ ಕಾಲ ಉಗ್ರ ಭಾಷಣ ಮಾಡಿದ್ದಾರೆ. ಇಸ್ರೇಲ್‌- ಪ್ಯಾಲೆಸ್ಟೀನ್‌ ಸಂಘರ್ಷ ಕೊನೆಗೊಳಿಸಿ, ಕದನ ವಿರಾಮ ಜಾರಿಗೆ ತರುವ ನಿಟ್ಟಿನಲ್ಲಿ ಶೇಕ್‌ ಅವರು ಪ್ರಮುಖ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.

ಹಮಾಸ್‌ ಬಂಡುಕೋರರು ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ 2023ರ ಅಕ್ಟೋಬರ್‌ 7ರಿಂದಲೂ ಇಸ್ರೇಲ್ ಸೇನೆ ಗಾಜಾದ ಮೇಲೆ ವ್ಯಾಪಕ ದಾಳಿ ನಡೆಸುತ್ತಿದೆ. ನಂತರ, ಇರಾನ್‌ನ ಆಕ್ಸಿಸ್‌ ಆಫ್‌ ರೆಸಿಸ್ಟೆನ್ಸ್‌, ಇರಾನ್‌, ಲೆಬನಾನ್‌, ಸಿರಿಯಾ, ಯೆಮೆನ್‌ ಮೇಲೆ ದಾಳಿ ನಡೆಸಿದ್ದ ಇಸ್ರೇಲ್‌, ಇದೀಗ ಕತಾರ್‌ ಮೇಲೂ ದಾಳಿ ನಡೆಸಿದೆ.

ಗಾಜಾದಲ್ಲಿ ಇದುವರೆಗೆ 64 ಸಾವಿರ ಮಂದಿಯನ್ನು ಹತ್ಯೆ ಮಾಡಿರುವುದಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿವೆ. ಗಲ್ಫ್‌ ಅರಬ್‌ ರಾಷ್ಟ್ರಗಳು ರಕ್ಷಿಸುವ ಅಮೆರಿಕ ಬದ್ಧತೆ ಸಾಕಷ್ಟು ಬಲವಾಗಿಲ್ಲ ಎಂಬ ಆತಂಕವು ಹೆಚ್ಚಾಗಿದೆ. ಆದರೂ, ಸೋಮವಾರ ನಡೆದ ಶೃಂಗಸಭೆಯು ನಿರ್ದಿಷ್ಟ ಗುರಿ ಸಾಧಿಸಲು ಸಫಲವಾಗಿದೆಯೆ ಎಂಬುದು ಖಚಿತಪಟ್ಟಿಲ್ಲ.

'ಇಸ್ರೇಲ್‌ನಿಂದ ದಾಳಿ ನಡೆದ ವಾರದೊಳಗಾಗಿ ಗಲ್ಫ್‌ ಹಾಗೂ ಇತರೆ ರಾಷ್ಟ್ರಗಳ ಮುಖ್ಯಸ್ಥರು ಒಂದೆಡೆ ಸೇರಿರುವುದು ಗಮನಾರ್ಹ ಸಾಧನೆಯಾಗಿದೆ. ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ತುರ್ತು ಪರಿಸ್ಥಿತಿಯು ಒಗ್ಗಟ್ಟಿನ ಅರ್ಥವನ್ನು ಒತ್ತಿ ಹೇಳಿದೆ' ಎಂದು ನ್ಯೂಯಾರ್ಕ್‌ನ ಜಾಗತಿಕ ಭದ್ರತೆಗಳ ಕುರಿತ ಸಂಶೋಧನಾ ಸಂಸ್ಥೆ 'ಸೌಫನ್‌ ಸೆಂಟರ್‌' ತಿಳಿಸಿದೆ.

 ಶೇಖ್‌ ತಮೀಮ್ ಬಿನ್ ಹಮದ್‌ ಅಲ್‌ ಥಾನಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries